ಕ್ಯಾಬ್‍ನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಮಹಿಳೆಗೆ ಚಾಲನಿಂದ ಲೈಂಗಿಕ ಕಿರುಕುಳ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

harrasment-car-diver
ಬೆಂಗಳೂರು, ಜೂ. 5- ಮುಂಬೈಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್‍ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಕ್ಯಾಬ್ ಚಾಲಕ ಬೆದರಿಸಿ, ಲೈಂಗಿಕ ಕಿರುಕುಳಕ್ಕೆ ಪ್ರಯತ್ನಿಸಿದ ಘಟನೆ ಜೀವನ್‍ಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಈ ಸಂಬಂಧ ಕ್ಯಾಬ್ ಚಾಲಕ ವಿ. ಅರುಣ್ (28) ಎಂಬಾತನನ್ನು ಪೊಲೀಸರು ಬಂಧಿಸಿ ವಾಹನ ವಶಪಡಿಸಿಕೊಂಡಿದ್ದಾರೆ. ವಾಸ್ತುಶಿಲ್ಪಿಯಾಗಿರುವ 26 ವರ್ಷದ ಮಹಿಳೆ ಕಾರ್ಯ ನಿಮಿತ್ತ ಮುಂಬೈಗೆ ತೆರಳಬೇಕಿತ್ತು. ಜೂನ್ 1ರಂದು ನಸುಕಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ಕ್ಕೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಮಾರ್ಗ ಮಧ್ಯ ಚಾಲಕ ಅರುಣ್ ವಾಹನದ ಮಾರ್ಗ ಬದಲಿಸಿದ. ಈ ಬಗ್ಗೆ ಮಹಿಳೆ ವಿಚಾರಿಸಿದಾಗ ಇದು ಅತಿ ಹತ್ತಿರದ ಹಾಗೂ ಸುಂಕ ಮುಕ್ತ ಮಾರ್ಗ ಎಂದು ಹೇಳಿ ಕ್ಯಾಬ್‍ನನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ಡು ಡೋರ್‍ಗಳನ್ನು ಲಾಕ್ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ. ಇದಕ್ಕೆ ಆಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದಾಗ, ತನ್ನ ಸ್ನೇಹಿತರನ್ನು ಇಲ್ಲಿಗೆ ಕರೆಸಿ ಸಾಮೂಹಿಕ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ. ಅಲ್ಲದೇ ಆಕೆಯ ಮೊಬೈಲ್ ಫೋನ್ ಕಸಿದುಕೊಂಡು ಕಿರುಚಾಡಿದರೆ ಕೊಲ್ಲುವುದಾಗಿ ಹೆದರಿಸಿದ.

ಮಹಿಳೆ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಕತ್ತು ಹಿಸುಕಲು ಯತ್ನಿಸಿದ. ನಾಳೆ ನಾನು ದುಬೈಗೆ ಹೋಗುತ್ತಿದ್ದೇನೆ. ನೀನು ಪೊಲೀಸರಿಗೆ ದೂರು ನೀಡಿದರೆ ಏನೂ ಪ್ರಯೋಜನವಿಲ್ಲ. ಅಷ್ಟರಲ್ಲಿ ನಾನು ವಿದೇಶಕ್ಕೆ ಹಾರಿರುತ್ತೇನೆ ಎಂದು ಆರೋಪಿ ಅರುಣ್ ಹೇಳಿದ್ದಾಗಿ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತನ್ನನ್ನು ಬಿಟ್ಟುಬಿಡುವಂತೆ ಪರಿಪರಿ ಯಾಗಿ ಮಹಿಳೆ ಬೇಡಿಕೊಂಡ ನಂತರ ಮುಂಜಾನೆ 3 ಗಂಟೆ ಸಮಯದಲ್ಲಿ ವಿಮಾನ ನಿಲ್ದಾಣದ ಬಳಿ ಆಕೆಯನ್ನು ಇಳಿಸಿ ಚಾಲಕ ಪರಾರಿಯಾದ.  ಈ ಘಟನೆಯಿಂದ ದಿಗ್ಭ್ರಮೆಗೊಂಡ ಮಹಿಳೆ ಪೊಲೀಸ್ ಕಮಿಷನರ್ ಅವ ರಿಗೆ ಮೇಲ್ ಮೂಲಕ ದೂರು ನೀಡಿ ಮುಂಬೈಗೆ ಪ್ರಯಾಣ ಬೆಳೆಸಿದರು.  ಈ ದೂರನ್ನು ಆಧರಿಸಿ ಜೀವನ್‍ಭೀಮಾ ನಗರ ಪೊಲೀಸರು ಆರೋಪಿ ಅರುಣ್‍ನನ್ನು ಬಂಧಿಸಿ, ಕ್ಯಾಬ್‍ನನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Facebook Comments

Sri Raghav

Admin