ಪಾರ್ಟಿಯಲ್ಲಿ ಶುರುವಾದ ಜಗಳ ಕ್ಯಾಬ್ ಚಾಲಕನ ಕೊಲೆಯಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.14-ಸ್ನೇಹಿತರು ಒಟ್ಟಾಗಿ ಪಾರ್ಟಿ ಮಾಡುತ್ತಿದ್ದಾಗ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕ್ಯಾಬ್ ಚಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಮೂಲತಃ ಚನ್ನಪಟ್ಟಣ ತಾಲ್ಲೂಕಿನ ಅಮ್ಮಳ್ಳಿದೊಡ್ಡಿ ನಿವಾಸಿ ಸುಹಾಸ್ ಗೌಡ (32) ಕೊಲೆಯಾದ ಯುವಕ. ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ ಸುಹಾಸ್ ಗೌಡ ಬೆಂಗಳೂರಿನ ಆವಲಹಳ್ಳಿಯಲ್ಲಿ ವಾಸವಾಗಿದ್ದರು.

ನಿನ್ನೆ ಸಂಜೆ ನಾಲ್ಕೈದು ಮಂದಿ ಸ್ನೇಹಿತರೊಂದಿಗೆ ಅಂಜನಾಪುರ 5ನೇ ಕ್ರಾಸ್‍ನ 3ನೇ ಮುಖ್ಯರಸ್ತೆಯ ಲಾಲ್‍ಬಹುದ್ದೂರ್ ಶಾಸ್ತ್ರಿ ನಗರದ ಬಳಿ ಸೇರಿ ರಾತ್ರಿ 8 ಗಂಟೆವರೆಗೂ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಒಬ್ಬಾತ ದೊಣ್ಣೆಯಿಂದ ಸುಹಾಸ್ ಗೌಡನ ತಲೆ, ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಪರಾರಿಯಾಗಿದ್ದಾನೆ.

ಇತ್ತ ಹಲ್ಲೆಯಿಂದ ಗಂಭೀರ ಗಾಯಗೊಂಡು ಅಸ್ವಸ್ಥನಾಗಿದ್ದ ಸುಹಾಸ್ ಗೌಡನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin