ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿಯಾದ ಬೆನ್ನಲ್ಲೇ ಬೀದಿಗೆ ಬಂತು ಆಕಾಂಕ್ಷಿಗಳ ಬೇಗುದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.11- ಸಚಿವ ಸಂಪುಟ ವಿಸ್ತರಣೆಗೆ ಇನ್ನರಡೇ ದಿನ ಬಾಕಿ ಉಳಿದಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳ ಬೇಗುದಿ ಬೀದಿಗೆ ಬರುವ ಲಕ್ಷಣಗಳು ಘೋಚರಿಸಿದೆ. ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಶಾಸಕರು ಧ್ವನಿ ಎತ್ತಿರುವುದು ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಚಿವ ಸ್ಥಾನಕ್ಕಾಗಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿರುವ ಶಾಸಕರು ಸಭೆ ನಡೆಸಲು ಮುಂದಾಗಿದ್ದು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಸುರಪುರ ಶಾಸಕ ರಾಜುಗೌಡ, ಬೀಳಗಿಯ ಮುರುಗೇಶ ನಿರಾಣಿ, ಸೇಡಂನ ರಾಜಕುಮಾರ ಪಾಟೀಲ ತೆಲ್ಕೂರ, ಯಲಬುರ್ಗಾದ ಹಾಲಪ್ಪ ಆಚಾರ್, ರಾಯಚೂರಿನ ಡಾ.ಶಿವರಾಜ್ ಪಾಟೀಲ,

ಗಂಗಾವತಿಯ ಪರಣ್ಣ ಮುನವಳ್ಳಿ, ಕಲಬುರ್ಗಿ ದಕ್ಷಿಣದ ದತ್ತಾತ್ರೇಯ ಪಾಟೀಲ ರೇವೂರ, ಕಲಬುರ್ಗಿ ಗ್ರಾಮಾಂತರದ ಬಸವರಾಜ ಮತ್ತಿಮೂಡ ಸೇರಿದಂತೆ ಮತ್ತಿತರ ಶಾಸಕರು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸಂಪುಟ ಸೇರ್ಪಡೆ ಕುರಿತು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರ ಪೈಕಿ ಬಹುತೇಕ ಶಾಸಕರು ಮುಖ್ಯಮಂತ್ರಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ಆಗಿರುವುದು ಮತ್ತೊಂದು ವಿಶೇಷ.

ಪಕ್ಷ ನಿಷ್ಠರನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ಬಂದವರಿಗೆ ಮಂತ್ರಿ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಒಂದು ಬಣದ ವಾದ. ಇನ್ನು ಸಂಪುಟಕ್ಕೆ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿರುವ ಶಾಸಕರು ತಮಗೆ ನಿರ್ಧಿಷ್ಟ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ವಲಸಿಗರ ಕಥೆಯಾದರೆ ಮೂಲ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವ ಶಾಸಕರು ಅಸಮಾಧಾನಗೊಂಡು ವರಿಷ್ಠರ ವಿರುದ್ಧ ಒಳಗೊಳಗೆ ಕುದಿಯುತ್ತಿದ್ದಾರೆ.

ಐದರಿಂದ ಆರು ಬಾರಿ , 4ರಿಂದ 5, ಮೂರು , ಎರಡು ಬಾರಿ ಗೆದ್ದಿರುವ ಶಾಸಕರು ತಮಗೆ ಮಂತ್ರಿ ಸ್ಥಾನ ಕೊಡದೆ ಕಡೆಗಣಿಸುತ್ತಿರುವುದಕ್ಕೆ ಮುನಿಸಿಕೊಂಡಿದ್ದು, ಅಧಿಕಾರಕ್ಕಾಗಿ ಬಂದವರಿಗೆ ಮಣೆ ಹಾಕಿದರೆ ನಮ್ಮಂಥ ಪಕ್ಷ ನಿಷ್ಠರ ಕಥೆ ಏನೆಂದು ಪ್ರಶ್ನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ -ಜೆಡಿಎಸ್‍ನಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿರುವುದೇನೋ ನಿಜ. ಹಾಗಂತ ಪಕ್ಷ ನಿಷ್ಠರನ್ನು ಕಡೆಗಣೆಸಿದರೆ ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ. ಪಕ್ಷದ ನಾಯಕರು ಈ ಬಗ್ಗೆ ಗಮನಹರಿಸಬೇಕೆಂದು ಅನೇಕರು ನೋವು ತೋಡಿಕೊಂಡಿದ್ದಾರೆ.

Facebook Comments