ಆಕ್ರೋಶ ಹೊರಹಾಕಿದ ಸಚಿವ ಸ್ಥಾನ ವಂಚಿತ ಶಾಸಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಸಾಕಷ್ಟು ಅಳೆದು ತೂಗಿ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆಗೆ ಆರಂಭವಾಗುತ್ತಿದ್ದಂತೆ ಸಚಿವ ಸ್ಥಾನ ವಂಚಿತರ ಆಕ್ರೋಶ ಭುಗಿಲೆದ್ದಿದೆ. ಸೋತವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುತ್ತಿರುವ ವರಿಷ್ಠರ ತೀರ್ಮಾನಕ್ಕೆ ಶಾಸಕರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.  ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಆಕ್ರೋಶಗೊಂಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ತಿಪ್ಪಾ ರೆಡ್ಡಿ, ಗೂಳಿಹಟ್ಟಿ ಶೇಖರ್, ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ರಾಜುಗೌಡ ನಾಯಕ್, ಸುನೀಲ್‍ಕುಮಾರ್ ಸೇರಿದಂತೆ ಮತ್ತಿತರ ಶಾಸ ಕರು ಅಸಮಾಧಾನ ಹೊರ ಹಾಕಿದ್ದಾರೆ.

ಅದರಲ್ಲು ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾ ಚಾರ್ಯ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದು, ಸೋತವರನ್ನೆಲ್ಲ ಮಂತ್ರಿ ಮಾಡುವುದಾದರೆ ಜನರಿಂದ ಗೆದ್ದ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.  ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಕೂಡ ಸಂಪುಟಕ್ಕೆ ತಮ್ಮನ್ನು ಪರಿಗಣಿಸದಿರುವುದಕ್ಕೆ ಬೇಸರ ಹೊರಹಾಕಿದ್ದಾರೆ. ಸೋತ ಅವರನ್ನು ಯಾವ ಕಾರಣಕ್ಕಾಗಿ ಮಂತ್ರಿ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸರ್ಕಾರ ರಚನೆ ಮಾಡಲು ಸಹಕಾರ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಯಾವ ರೀತಿ ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಸಂಪುಟದಲ್ಲಿ ಸಮಾನತೆ ಕಾಣುತ್ತಿಲ್ಲ. 50 ವರ್ಷಗಳ ರಾಜಕೀಯ ಮಾಡಿದ್ದೇ ವ್ಯರ್ಥ ವಾಯಿತು ಎಂಬ ನೋವು ಕಾಡುತ್ತಿದೆ. ನಾನು 6 ಬಾರಿ ಶಾಸಕನಾಗಿದ್ದೇನೆ. ನನ್ನಂತವರನ್ನೇ ಕಡೆಗಣಿಸುತ್ತಾರೆಂದರೆ ನಮ್ಮ ನೋವು ಯಾರಿಗೆ ಹೇಳಿಕೊಳ್ಳಬೇಕು ಎಂದು ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಇನ್ನು ಹಾವೇರಿ ಶಾಸಕ ನೆಹರು ಓಲೇಕಾರ್ ಕೂಡ ಸಂಪುಟದಲ್ಲಿ ಸ್ಥಾನಮಾನ ಸಿಗದಿರುವುದಕ್ಕೆ ಕಿಡಿಕಾರಿದ್ದಾರೆ. ನನಗೆ ಈ ಬಾರಿಯಾದರೂ ಮಂತ್ರಿಸ್ಥಾನ ಸಿಗಬಹುದೆಂಬ ನಿರೀಕ್ಷೆಯಿತ್ತು.

ಪರಿಶಿಷ್ಟ ಜಾತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ನನಗೆ ಈವರೆಗೂ ಯಾವುದೇ ದೂರವಾಣಿ ಕರೆ ಬಂದಿಲ್ಲ. ಬರುವ ಲಕ್ಷಣಗಳೂ ಇಲ್ಲ. ಸಚಿವನಾಗಬೇಕೆಂಬ ಆಸೆ ಬಿಟ್ಟುಬಿಟ್ಟಿದ್ದೇನೆ ಎಂದು ಆಕ್ರೋಶದಿಂದ ನುಡಿದರು. ಇದೇ ರೀತಿ ಕೆಲವು ಶಾಸಕರು ಬಹಿರಂಗ ವಾಗಿ ಮಾತನಾಡದಿದ್ದರೂ ಒಳಗೊಳಗೆ ವರಿಷ್ಠರ ತೀರ್ಮಾನಕ್ಕೆ ಆಕ್ರೋಶ ಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅದರಲ್ಲೂ ಕರಾವಳಿ ಭಾಗದಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸುನೀಲ್‍ಕುಮಾರ್, ಅಪ್ಪಚ್ಚು ರಂಜನ್, ಬೋಪಯ್ಯ, ಎಸ್.ಎ. ರಾಮದಾಸ್ ಸೇರಿದಂತೆ ಹಲವರು ಭಿನ್ನಮತ ಸಾರುವ ಸಾದ್ಯತೆಯಿದೆ.  ಈ ಬಾರಿಯೂ ಸಂಪುಟದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಪರಿಗಣಿಸದೆ ಕೇವಲ ಸರ್ಕಾರ ರಚನೆಗೆ ಕಾರಣರಾದವರಿಗೆ ಮಣೆ ಹಾಕಲಾಗಿದೆ ಎಂಬ ಮನೋಭಾವನೆ ಬಹುತೇಕರಲ್ಲಿ ಮೂಡಿದೆ.

ಕಲ್ಯಾಣ ಕರ್ನಾಟಕ ಭಾಗದಿಂದ ಕೇವಲ ಮುರುಗೇಶ್ ನಿರಾಣಿಗೆ ಸ್ಥಾನ ನೀಡಲಾಗಿದೆ. ಈ ಭಾಗದಿಂದ ವಿಜಾಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಪ್ಪುಗೌಡ ಪಾಟೀಲ್, ಸುರಪುರದ ರಾಜುಗೌಡ ನಾಯಕ್, ರಾಯಚೂರಿನ ಶಿವರಾಜ್ ಪಾಟೀಲ್, ಯಲಬುರ್ಗದ ಆಚಾರ್ ಹಾಲಪ್ಪ, ಶಿವನಗೌಡ ನಾಯಕ್, ಅರಗ ಜ್ಞಾನೇಂದ್ರ, ಪೂರ್ಣಿಮಾ ಶ್ರೀನಿವಾಸ್ ಮತ್ತಿತರರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಿದರೆ ಪಕ್ಷದ ಕೆಂಗೆಣ್ಣಿಗೆ ಗುರಿಯಾಗ ಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕೆಲವರು ಹೇಳಲೂ ಆಗದೆ ಒಳಗೊಳಗೆ ಕುದಿಯುತ್ತಿದ್ದಾರೆ.ವಲಸೆ ಬಂದವರಿಗೆ ಮಣೆ ಹಾಕುವುದಾದರೆ ಪಕ್ಷಕ್ಕೆ ದುಡಿದ ನಾವೇನು ರಾಜಕೀಯ ಸನ್ಯಾಸಿಗಳೇ ಎಂದು ಅನೇಕ ಶಾಸಕರು ತಮ್ಮ ಆಪ್ತರ ಬಳಿ ಮಾತನಾಡಿ ಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನು ಯಾವ ತಿರುವು ಪಡೆದುಕೊಂಡು ಸಿಎಂ ಬಿಎಸ್‍ವೈ ಅವರಿಗೆ ಮತ್ತೊಂದು ಕಂಟಕ ಎದುರಾಗಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Facebook Comments