3 ಬಾರಿ ಸಂಪುಟ ವಿಸ್ತರಣೆ ನಡೆದರೂ ಶಮನವಾಗದ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.16- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪಕ್ಷದಲ್ಲಿ ಆಂತರಿಕ ಕಲಹ, ಅಸಮಾಧಾನಿತರ ಆಕ್ರೋಶ ಹೊಗೆಯಾಡುತ್ತಲೇ ಬಂದಿದೆ.  ಪುಗಾರಿಕೆ, ಮೂಲ, ವಲಸಿಗರ ತಿಕ್ಕಾಟ ನಡೆದುಕೊಂಡೇ ಬಂದಿದೆ. ಮೂರು ಬಾರಿ ಸಂಪುಟ ವಿಸ್ತರಣೆ ನಡೆದರೂ ಅತೃಪ್ತಿ ಮಾತ್ರ ಶಮನವಾಗಿಲ್ಲ.

2019 ರ ಜೂನ್ 26 ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದಂದಿನಿಂದಲೂ ಪಕ್ಷದಲ್ಲಿ ಅತೃಪ್ತಿಯ ಹೊಗೆಯಾಡುತ್ತಲೇ ಇದೆ. ಮೂವರಿಗೆ ಡಿಸಿಎಂ ಸ್ಥಾನ ನೀಡಿದ್ದು ಅದರಲ್ಲೂ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದು, ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಲಾಕ್‍ಡೌನ್ ಸಮಯದಲ್ಲೇ ಅತೃಪ್ತರ ಸಭೆ ನಡೆದಿತ್ತು, ಶಾಸಕರಾಗಿದ್ದ ಉಮೇಶ್ ಕತ್ತಿ ಅಪಾರ್ಟ್ ಮೆಂಟ್ ನಲ್ಲಿ ಸಭೆ ನಡೆದಿತ್ತು. ಮುರುಗೇಶ್ ನಿರಾಣಿ, ರಾಮದಾಸ್, ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದು ಸವದಿ ಸೇರಿ 10ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು. ಇದು ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿತ್ತು.

ತದನಂತರ ಶಾಸಕರ ಭವನದಲ್ಲಿ ಮತ್ತೊಮ್ಮೆ ಸಭೆ ನಡೆಸಲಾಯಿತು. ಸತತವಾಗಿ ಎರಡು ದಿನ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ರಾಜೂಗೌಡ, ನಿರಾಣಿ, ರಾಜಕುಮಾರ್ ಪಾಟೀಲ್ ತೆಲ್ಕೂರ, ಹಾಲಪ್ಪ ಆಚಾರ್, ಶಿವನಗೌಡ ಪಾಟೀಲ್, ಗಂಗಾವತಿ ಪರಣ್ಣ ಮುನವಳ್ಳಿ, ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮೂಡ, ಆನಂದ ಮಾಮನಿ ಸೇರಿದಂತೆ ಹಲವು ಶಾಸಕರು ಸಭೆ ನಡೆಸಿ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮೂಲ ಬಿಜೆಪಿಗರ ಕಡೆಗಣಿಸಿ ವಲಸಿಗರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂದು ಕಿಡಿಕಾರಿದ್ದರು.

# ಅತೃಪ್ತರಿಗೆ ನಿಗಮ-ಮಂಡಳಿ ಗಿಫ್ಟ್:
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಲವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅಸಮಾಧಾನ ಶಮನ, ಭಿನ್ನಮತಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುವಲ್ಲಿ ಬಹುತೇಕ ಸಿಎಂ ಸಫಲರಾಗಿದ್ದಾರೆ. ರಾಜೂಗೌಡ, ಶಿವನಗೌಡ ನಾಯಕ್, ಸಿದ್ದು ಸವದಿ, ಪರಣ್ಣ ಮುನವಳ್ಳಿ, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಬಂಡಾಯ ಶಮನ ಮಾಡುವಲ್ಲಿ ಬಿಎಸ್ವೈ ಸಫಲರಾಗಿದ್ದಾರೆ.

ಸಂಪುಟ ವಿಸ್ತರಣೆ ಎನ್ನುವ ಜೇನುಗೂಡಿಗೆ ಕೈಹಾಕುವ ಮುನ್ನ ಅಸಮಾಧಾನಿತರ ಸಂಖ್ಯೆಯನ್ನು ನಿಗಮ ಮಂಡಳಿ ಮೂಲಕ ತಗ್ಗಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಬಹಳ ಎಚ್ಚರಿಕೆಯಿಂದ ಮೂರನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇಬ್ಬರು ವಲಸಿಗರು, ಐವರು ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಹೊಸದಾಗಿ ಅವಕಾಶ ನೀಡಿದ್ದರು.

ಅಸಮಾಧಾನಿತರ ತಂಡದ ಪ್ರಮುಖ ನಾಯಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಸಿ.ಪಿ ಯೋಗೇಶ್ವರ್‍ಗೆ ಅವಕಾಶ ಕಲ್ಪಿಸುವ ಮೂಲಕ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‍ರನ್ನು ಏಕಾಂಗಿಯಾಗಿಸಲಾಗಿದೆ. ಹಾಗಾಗಿ ಈ ಹಿಂದೆ ನಡೆದ ರೀತಿಯ ಅಸಮಾಧಾನಿತರ ಸಭೆ ಈಗ ನಡೆಯುವುದು ಅನುಮಾನವಾಗಿದೆ.

# ಸೈನಿಕನಿಂದ ಸಮಸ್ಯೆ:
ಈ ಬಾರಿ ಸಿ.ಪಿ ಯೋಗೇಶ್ವರ್‍ಗೆ ಸಂಪುಟದಲ್ಲಿ ಅವಕಾಶ ನೀಡಿದ್ದೇ ಹೆಚ್ಚಿನ ಸಮಸ್ಯೆ ಸೃಷ್ಟಿಸಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಬಂಡೆದಿದ್ದಾರೆ. ಇದೊಂದು ವಿಚಾರದಲ್ಲಿ ಯಡಿಯೂರಪ್ಪ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ.  ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯದಲ್ಲಿ ಸಿಡಿ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಂಡಾಯ ಶಾಸಕರಾಗಿರುವ ಯತ್ನಾಳ್ ಇದೀಗ ಯಡಿಯೂರಪ್ಪ ಅವರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಕೆಲವರು ಮಂತ್ರಿಗಳಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರತಿ ದಿನವೂ ಸಿಡಿ ಹೇಳಿಕೆ ನೀಡಿ ಸಿಎಂ ಹಾಗು ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸುತ್ತಿದ್ದಾರೆ.

ಉಮೇಶ್ ಕತ್ತಿ, ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ, ರಾಜೂಗೌಡ, ಶಿವನಗೌಡ ನಾಯಕ್, ಸಿದ್ದು ಸವದಿ, ಪರಣ್ಣ ಮುನವಳ್ಳಿ, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ನಿಗಮ ಮಂಡಳಿ ಸ್ಥಾನ ಕೊಟ್ಟಿದ್ದರಿಂದ ಅತೃಪ್ತರ ಬಣ ಬಲ ಕಳೆದುಕೊಂಡಿದೆ. ಮೂಲ ಬಿಜೆಪಿ ಪಾಳಯದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಸತೀಶ್ ರೆಡ್ಡಿ, ರಾಮದಾಸ್, ಸುನೀಲ್ ಕುಮಾರ್, ಅಭಯ್ ಪಾಟೀಲ್, ಅರವಿಂದ ಬೆಲ್ಲದ್, ವಲಸಿಗರಲ್ಲಿ ಹೆಚ್. ವಿಶ್ವನಾಥ್ ಮಾತ್ರ ಬಂಡೆದ್ದಿದ್ದಾರೆ.
ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆ ಆರಂಭಗೊಂಡಿದ್ದು, ದೆಹಲಿ ಅಂಗಳಕ್ಕೂ ತಲುಪಿದೆ.

ಇದರಲ್ಲಿ ರೇಣುಕಾಚಾರ್ಯ ಮನವೊಲಿಕೆ ಸಾಧ್ಯವಿದ್ದು, ಕೇವಲ ಯತ್ನಾಳ್ ಮತ್ತು ವಿಶ್ವನಾಥ್ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ಈ ಇಬ್ಬರು ನಾಯಕರು ನಿರಂತರವಾಗಿ ಟೀಕೆ ಮಾಡುತ್ತಾ ಪಕ್ಷಕ್ಕೆ ಮತ್ತಷ್ಟು ಮುಜುಗರವನ್ನುಂಟು ಮಾಡಬಹುದು.

Facebook Comments