ಹೊಸ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಿದ ಸಿಎಂ, ಯಾರಿಗೆ ಯಾವ ಖಾತೆ, ಇಲ್ಲಿದೆ ಡೀಟೈಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜೂ. 24 : ಪಕ್ಷೇತರ ಶಾಸಕರಾದ ರಾಣೆಬೆನ್ನೂರಿನ ಶಾಸಕ ಆರ್.ಶಂಕರ್ ಹಾಗೂ ಮುಳಬಾಗಿಲಿನ ನಾಗೇಶ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 10 ದಿನಗಳ ಬಳಿಕ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಸಚಿವ ಆರ್.ಶಂಕರ್​ಗೆ ಪೌರಾಡಳಿತ ಖಾತೆ ಮತ್ತು ಎಚ್.ನಾಗೇಶ್​ಗೆ ಸಣ್ಣ ಕೈಗಾರಿಕೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಈ ಮೊದಲು ಸಣ್ಣ ಕೈಗಾರಿಕೆ ಖಾತೆಯನ್ನು ನಿಭಾಯಿಸುತ್ತಿದ್ದ ಗುಬ್ಬಿ ಶಾಸಕ ಎಂ ಆರ್‌ ಶ್ರೀನಿವಾಸ್‌ ಅವರಿಗೆ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಬಳಿಯಿದ್ದ ಶಿಕ್ಷಣ ಖಾತೆಯನ್ನು ನೀಡಲಾಗಿದೆ.

ರಾಜ್ಯದ ಏಕೈಕ ಬಿಎಸ್‌ಪಿ ಶಾಸಕರಾಗಿದ್ದ ಕೊಳ್ಳೆಗಾಲ ಕ್ಷೇತ್ರದ ಎನ್‌ ಮಹೇಶ್‌ ಈ ಮೊದಲು ಪ್ರಾಥಮಿಕ​ & ಪ್ರೌಢಶಿಕ್ಷಣ ಖಾತೆಯನ್ನು ನಿಭಾಯಿಸುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಖಾತೆಯನ್ನು ಮುಖ್ಯಮಂತ್ರಿಯೇ ಇಟ್ಟುಕೊಂಡಿದ್ದರು. ಇದೀಗ ಶ್ರೀನಿವಾಸ್‌ ಹೆಗಲಿದೆ ಖಾತೆಯನ್ನು ವರ್ಗಾಯಿಸಲಾಗಿದೆ.

ಜೂ. 14ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದರು.

ಅದಾದ ಬಳಿಕ ನೂತನ ಸಚಿವರಿಗೆ ಯಾವ ಖಾತೆ ಹಂಚಿಕೆಯಾಗಲಿದೆ ಎನ್ನುವ ಕುರಿತು ಎದ್ದಿದ್ದ ಕುತೂಹಲಗಳಿಗೀಗ ತೆರೆ ಬಿದ್ದಿದ್ದು, ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ.

ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ರವಾನಿಸಿದ ಬೆನ್ನಲ್ಲೇ ಅಂಕಿತ ಹಾಕಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin