ಬೈಎಲೆಕ್ಷನ್ ರಿಸಲ್ಟ್ ಬಂತು, ಶುರುವಾಯ್ತು ಸಂಪುಟ ವಿಸ್ತರಣೆ ಸರ್ಕಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.9- ಉಪಚುನಾವಣೆಯಲ್ಲಿ ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ಜರುಗಲಿದೆ.ಸದ್ಯ ಲೋಕಸಭೆಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂಪ್ಪನವರು ಒಂದೆರಡು ದಿನಗಳಲ್ಲಿ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರಿಂದ ಹಸಿರುನಿಶಾನೆ ಪಡೆಯಲಿದ್ದಾರೆ.

ಚುನಾವಣೆಗೂ ಮುನ್ನವೇ ಪಕ್ಷ ಸೇರ್ಪಡೆಯಾಗಿದ್ದ ಮಾಜಿ ಶಾಸಕರೆಲ್ಲರಿಗೂ ಉಪಚುನಾವಣೆಯಲ್ಲಿ ಗೆದ್ದರೆ ಮಂತ್ರಿ ಸ್ಥಾನ ನೀಡುವುದಾಗಿ ಬಿಎಸ್‍ವೈ ಆಶ್ವಾಸನೆ ನೀಡಿದ್ದರು. ಇದೀಗ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿರುವುದರಿಂದ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆ ನಡೆಯಲಿದೆ.

ಪಕ್ಷದಲ್ಲಿ ಎಷ್ಟೇ ಪರ, ವಿರೋಧ ಅಭಿಪ್ರಾಯ ವ್ಯಕ್ತವಾದರೂ ನಂಬಿ ಬಂದಿರುವ ನಿಮ್ಮನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ವಾಗ್ದಾನ ಮಾಡಿದ್ದ ಅವರು, ಉಪಚುನಾವಣೆಯಲ್ಲಿ ಗೆದ್ದ ಎಲ್ಲರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ಖುದ್ದು ಭರವಸೆ ನೀಡಿದ್ದರು. ಅದರಂತೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ್, ಕೆ.ಸಿ.ನಾರಾಯಣಗೌಡ, ಡಾ.ಕೆ.ಸುಧಾಕರ್ ಸಂಪುಟಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಾತರಿಯಾಗಿದೆ. ಸದ್ಯ ಸಂಪುಟದಲ್ಲಿ 16 ಖಾತೆಗಳು ಖಾಲಿಯಿದ್ದು ಕೆಲವು ಸಚಿವರಿಗೆ ಹೆಚ್ಚುವರಿ ಖಾತೆಗಳನ್ನು ನೀಡಲಾಗಿದೆ.

ಉಪಚುನಾವಣೆಯಲ್ಲಿ ಗೆದ್ದ 12 ಮಂದಿಯೂ ಯಡಿಯೂರಪ್ಪನವರ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಭಾರೀ ನೀರಾವರಿ, ಸಹಕಾರ, ಉನ್ನತ ಶಿಕ್ಷಣ, ಆಹಾರ ಮತ್ತು ನಾಗರಿಕ ಪೂರೈಕೆ, ಸಮಾಜ ಕಲ್ಯಾಣ ಸೇರಿದಂತೆ ಹೆಚ್ಚುವರಿ ಖಾತೆಗಳನ್ನು ಹೊಂದಿರುವ ಸಚಿವರಿಂದ ಹಿಂಪಡೆದು ನೂತನವಾಗಿ ಸಂಪುಟ ಸೇರ್ಪಡೆಯಾಗುವವರಿಗೆ ಖಾತೆಗಳನ್ನು ನೀಡಲಿದ್ದಾರೆ.

ಮೂಲಗಳ ಪ್ರಕಾರ ಸಿಎಂ ಯಡಿಯೂರಪ್ಪನವರು ಎರಡೇ ದಿನಗಳ ನಂತರ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡ ಮತ್ತಿತರರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಉಪಚುನಾವಣೆಯನ್ನು ಯಡಿಯೂರಪ್ಪನವರೇ ಸಂಪೂರ್ಣವಾಗಿ ಮುನ್ನಡೆಸಿ ಗೆದ್ದಿರುವುದರಿಂದ ಸಂಪುಟ ಪುನಾರಚನೆ ಇಲ್ಲವೆ ವಿಸ್ತರಣೆಗೆ ಸಂಬಂಧಿಸಿದಂತೆ ಮೊದಲಿನಂತೆ ಸಿಎಂ ಮೇಲೆ ಒತ್ತಡ ಹಾಕುವ ಸ್ಥಿತಿಯೂ ಇಲ್ಲ. ಯಡಿಯೂರಪ್ಪನವರಿಗೆ ಸಂಪೂರ್ಣ ಮುಕ್ತ ಸ್ವಾತಂತ್ರ್ಯ ನೀಡಲಿದ್ದು, ಅವರಿಷ್ಟದಂತೆಯೇ ಸಂಪುಟ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin