ಸಚಿವ ಸಂಪುಟ ವಿಸ್ತರಣೆ ವಿಳಂಬ, ಆಕಾಂಕ್ಷಿಗಳಲ್ಲಿ ತಳಮಳ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.13-ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ದಿನದಿಂದ ದಿನಕ್ಕೆ ವಿಳಂಬವಾಗುತ್ತಿರುವುದು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ. ಚುನಾವಣೆಯಲ್ಲಿ ಗೆದ್ದ 24 ಗಂಟೆಯೊಳಗೆ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಚಾರ ಮಾಡಿದ ಕಡೆಯಲ್ಲೆಲ್ಲ ಮತದಾರರಿಗೆ ಆಶ್ವಾಸನೆ ಕೊಟ್ಟಿದ್ದರು.

ಆದರೆ ಗೆದ್ದು ಐದು ದಿನ ಕಳೆದರೂ ಇನ್ನೂ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಾರದಿರುವುದು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಬಹಿರಂಗವಾಗಿ ಯಾರೊಬ್ಬರು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಆಂತರಿಕವಾಗಿ ತಮ್ಮ ಕೈ ತಾವೇ ಹಿಸುಕಿಕೊಳ್ಳುತ್ತಿದ್ದಾರೆ.

ಸಿಎಂ ಯಡಿಯೂರಪ್ಪನವರ ಮೇಲೆ ನಮಗೆ ನಂಬಿಕೆ ಇದೆ ಎನ್ನುತ್ತಲೇ ಧನುರ್ಮಾಸ ಆರಂಭವಾಗುವುದರೊಳಗೆ ಸಂಪುಟ ವಿಸ್ತರಣೆ ಮಾಡಬೇಕೆಂದು ನೂತನ ಶಾಸಕರು ಪಟ್ಟು ಹಿಡಿದಿದ್ದಾರೆ. ಸೋಮವಾರದಿಂದ ಧನುರ್ಮಾಸ ಆರಂಭವಾದರೆ ಸಂಕ್ರಾಂತಿವರೆಗೂ ಯಾವುದೇ ಶುಭ ಸಮಾರಂಭಗಳನ್ನು ನಡೆಸುವಂತಿಲ್ಲ. ಅದರಲ್ಲೂ ಸಚಿವರು ಧನುರ್ಮಾಸದಲ್ಲಿ ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕುತ್ತಾರೆ.

ಹೀಗಾಗಿ ಭಾನುವಾರ ಸಂಪುಟ ವಿಸ್ತರಣೆಗೆ ಸಮಯ ನಿಗದಿಪಡಿಸಬೇಕೆಂದು ಶಾಸಕರು ಸಿಎಂಗೆ ನಿರಂತರವಾಗಿ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಸೋಮವಾರದಿಂದ ಧನುರ್ಮಾಸ ಆರಂಭವಾದರೆ ಒಂದು ತಿಂಗಳು ಕಾಯಬೇಕಾಗುತ್ತದೆ. ಅಷ್ಟರೊಳಗೆ ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆಗಳಾಗಬಹುದು. ವಿಳಂಬ ಮಾಡದೆ ವಿಸ್ತರಣೆ ಮಾಡಬೇಕೆಂಬುದು ಬಹುತೇಕ ಶಾಸಕರ ಬೇಡಿಕೆಯಾಗಿದೆ.

ಸದ್ಯ ಸಂಪುಟದಲ್ಲಿ 16 ಸ್ಥಾನಗಳು ಖಾಲಿಯಿದ್ದು, ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಹೆಚ್ಚು ಬಾರಿ ಗೆದ್ದಿರುವ ಶಾಸಕರು ಒಂದು ಕೈ ನೋಡೇ ಬಿಡೋಣ ಎಂದು ಅಖಾಡಕ್ಕಿಳಿದಿದ್ದಾರೆ.

ಉಮೇಶ್ ಕತ್ತಿ, ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್‍ಕುಮಾರ್, ಎಸ್.ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಂ.ಪಿ.ಕುಮಾರಸ್ವಾಮಿ, ಅರಗ ಜ್ಞಾನೇಂದ್ರ, ಹರತಾಳ್ ಹಾಲಪ್ಪ, ಕುಮಾರ್ ಬಂಗಾರಪ್ಪ, ಎಸ್.ವಿ.ರಾಮಚಂದ್ರಪ್ಪ, ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಹಾಲಪ್ಪ ಆಚಾರ್, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರು ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ.

ಇದರ ಜೊತೆಗೆ ಸಂಘಪರಿವಾರದ ಹಿನ್ನೆಲೆಯಿಂದ ಬಂದಿರುವ ಕೆಲವು ಶಾಸಕರು ಕೂಡ ತಮ್ಮ ತಮ್ಮ ಗಾಡ್ ಫಾದರ್‍ಗಳ ಮೂಲಕ ಸಂಪುಟಕ್ಕೆ ಪರಿಗಣಿಸುವಂತೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗೆ ಮೂಲ ಬಿಜೆಪಿಯಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೆಚ್ಚಳವಾಗುತ್ತಿರುವುದು ನೂತನ ಶಾಸಕರಲ್ಲಿ ಆತಂಕ ತಂದಿದೆ.

ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಆದರೆ ಹೈಕಮಾಂಡ್ ಅನುಮತಿ ಇಲ್ಲದೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂಬ ಸ್ಥಿತಿಯಲ್ಲಿರುವ ಬಿಎಸ್‍ವೈ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ. ವರಿಷ್ಠರ ಬಳಿ ಚರ್ಚಿಸಿ ಸಂಪುಟ ವಿಸ್ತರಣೆಗೆ ದಿನಾಂಕವನ್ನು ನಿಗದಪಡಿಸುತ್ತೇನೆ. ಎಲ್ಲರೂ ತಾಳ್ಮೆಯಿಂದ ಕಾಯಬೇಕೆಂಬ ಸೂಚನೆ ಕೊಟ್ಟಿದ್ದಾರೆ.

Facebook Comments

Sri Raghav

Admin