9 ನೂತನ ಶಾಸಕರಿಗೆ ಸಚಿವ ಸ್ಥಾನದ ಪಟ್ಟಿ ರೆಡಿ, ಖಾತೆ ಹಂಚಿಕೆ ಬಾಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.20- ಅಮಿತ್ ಷಾ ಸಿದ್ಧಪಡಿಸಿ ದ್ದಾರೆ ಎನ್ನಲಾದ ಸಚಿವರ ಪಟ್ಟಿ ಅಂತಿಮಗೊಂಡರೆ ಉಪಚುನಾವಣೆಯಲ್ಲಿ ಗೆದ್ದ 7 ಶಾಸಕರ ಜೊತೆಗೆ 2018ರ ಚುನಾವಣೆಯಲ್ಲಿ ಗೆದ್ದಿದ್ದ ಪಕ್ಷದ ಇಬ್ಬರು ಶಾಸಕರು ಯಡಿಯೂರಪ್ಪ ನವರ ಸಂಪುಟ ಸೇರ್ಪಡೆಯಾಗುವುದು ಖಚಿತವಾಗಿದ್ದು, ಅವರಿಗೆ ಯಾವ ಖಾತೆ ನೀಡಬೇಕೆಂಬು ದನ್ನೂ ಕೂಡ ಷಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ 11 ಮಂದಿ ನೂತನ ಶಾಸಕರು ಯಾವಾಗ ಸಚಿವ ಸಂಪುಟ ವಿಸ್ತರಣೆಯಾಗಿ ತಮಗೆ ಸಚಿವ ಹುದ್ದೆ ನೀಡುತ್ತಾರೊ ಎಂದು ಕಾಯುತ್ತಿದ್ದಾರೆ. ಈಗಾಗಲೇ ವಿಳಂಬವಾಗಿರುವುದಕ್ಕೆ ಅವರು ರೋಸಿಹೋಗಿದ್ದಾರೆ. ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜರಕಿಹೊಳಿ ನೇತೃತ್ವದಲ್ಲಿ ಸಚಿವಾಕಾಂಕ್ಷಿ ಶಾಸಕರ ನಿಯೋಗ ಮೊನ್ನೆ ಹುಬ್ಬಳ್ಳಿಯಲ್ಲಿ ಅಮಿತ್ ಷಾ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಇಟ್ಟಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗುತ್ತದೆ ಎಂಬ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಯಾರಿಂದಲೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕೆಲವು ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಸಂಬಂಧ ಕಳೆದ ಶನಿವಾರ ಬಿಎಸ್‍ವೈ ಅಮಿತ್ ಶಾ ಮುಂದಿಟ್ಟಿದ್ದ ಪ್ರಸ್ತಾಪ ಅವರಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಡಾವೋಸ್‍ನಿಂದ ಹಿಂತಿರುಗಿ ನಂತರ ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡಿ ಎಂದು ಹೇಳಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಉಪಚುನಾವಣೆಯಲ್ಲಿ ಗೆದ್ದ 11 ಅರ್ಹ ಶಾಸಕರಲ್ಲಿ ಏಳು ಮಂದಿಗೆ ಮಾತ್ರ ಸಂಪುಟ ವಿಸ್ತರಣೆ ವೇಳೆ ಸ್ಥಾನ ನೀಡಲು ಅಮಿತ್ ಷಾ ಬಯಸಿದ್ದು, ಅವರ ಜೊತೆಗೆ ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿಗೂ ಸಚಿವ ಸ್ಥಾನ ನೀಡಲು ಉದ್ದೇಶಿಸಿದ್ದಾರೆ. ಇವರಿಗೆ ನಿರ್ದಿಷ್ಟ ಖಾತೆಗಳನ್ನೂ ಷಾ ಅವರೇ ಅಂತಿಮಗೊಳಿಸಿದ್ದಾರೆ. ಆದರೆ ಯಡಿಯೂರಪ್ಪ ಅವರ ಪಟ್ಟಿಯೇ ಬೇರೆ ಇದೆ.

ಎಲ್ಲ 11 ಅರ್ಹ ಶಾಸಕರಿಗೂ ಈಗ ಸಚಿವ ಸ್ಥಾನ ನೀಡಲೇಬೇಕು ಎಂದು ಯಡಿಯೂರಪ್ಪ ಬಯಸಿದ್ದಾರೆ. ಅದರ ಜೊತೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾದ ಉಮೇಶ್ ಕತ್ತಿ, ವಿ.ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ, ಎಸ್.ಅಂಗಾರ, ದತ್ತಾತ್ರೇಯ ಪಾಟೀಲ ರೇವೂರ, ಎ.ರಾಮದಾಸ್, ಅಪ್ಪಚ್ಚು ರಂಜನ್ ಅವರ ಹೆಸರನ್ನೂ ನಮೂದಿಸಿದ್ದಾರೆ. ಆದರೆ ಇವರೆಲ್ಲರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ರಾಷ್ಟ್ರಾಧ್ಯಕ್ಷರು ಒಪ್ಪುತ್ತಾರೆಯೇ ಎನ್ನುವ ಪ್ರಶ್ನೆ ಇದೆ.

ಅಮಿತ್ ಷಾ ಸಿದ್ಧಪಡಿಸಿರುವ ಒಟ್ಟು ಒಂಬತ್ತು ಶಾಸಕರ ಪಟ್ಟಿಯಲ್ಲಿ, ಸಮ್ಮಿಶ್ರ ಸರ್ಕಾರದ ಪತನದ ವೇಳೆ ಎಲ್ಲ ಶಾಸಕರ ನೇತೃತ್ವ ವಹಿಸಿದ್ದ ಗೋಕಾಕ್ ಶಾಸಕ ರಮೇಶ್ ಜÁರಕಿಹೊಳಿ ಅವರಿಗೆ ಹೆಚ್ಚು ಆದ್ಯತೆ ಸಿಗಲಿದೆ. ರಮೇಶ್ ಜÁರಕಿಹೊಳಿ ಬಯಸಿರುವ ಜಲಸಂಪನ್ಮೂಲ ಖಾತೆಯೇ ಅವರಿಗೆ ಸಿಗಲಿದೆ. ಜೊತೆಗೆ ಉಪ ಮುಖ್ಯಮಂತ್ರಿ ಹುದ್ದೆಯೂ ಒಲಿಯಲಿದೆ ಎನ್ನಲಾಗಿದೆ.

ಅಮಿತ್ ಷಾ ಪಟ್ಟಿಯಲ್ಲಿ ಇರುವ ಇನ್ನೆರಡು ಹೆಸರಾದ ಉಮೇಶ್ ಕತ್ತಿ ಮತ್ತು ಅರವಿಂದ್ ಲಿಂಬಾವಳಿ ಅವರುಗಳಿಗೆ ಹಾಲಿ ಸಚಿವರುಗಳಲ್ಲಿನ ಖಾತೆಗಳಲ್ಲಿ ಬದಲಾವಣೆ ಮಾಡಿ ಖಾತೆ ಹಂಚುವ ಕುರಿತು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ವರಿಷ್ಠರ ಸೂತ್ರವೇನು?:8+7+1 ಸೂತ್ರದಡಿ ಮಂತ್ರಿ ಮಂಡಲ ವಿಸ್ತರಿಸಿ ಎಂದು ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಯಡಿಯೂರಪ್ಪವರಿಗೆ ಸೂಚಿಸಿದ್ದಾರೆ. ಈ ಸೂತ್ರಕ್ಕೆ ಯಡಿಯೂರಪ್ಪ ಸಮ್ಮತಿಸಿಲ್ಲ. ವರಿಷ್ಠರು ಅದನ್ನು ಬಿಟ್ಟು ಹೊರಬಂದಿಲ್ಲ. ಹೀಗಾಗಿ ವಿಸ್ತರಣೆ ನೆನೆಗುದಿಗೆ ಬಿದ್ದಿದೆ.

ಮಂತ್ರಿಮಂಡಲದಲ್ಲಿ ಖಾಲಿ ಇರುವ 16ರಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಆಯ್ಕೆಗೊಂಡ 8 ಹೊಸಬರಿಗೆ , ಏಳು ಸ್ಥಾನಗಳನ್ನು ಮೂಲ ಬಿಜೆಪಿಯವರಿಗೆ ಹಾಗೂ ಒಂದು ಸ್ಥಾನವನ್ನು ಖಾಲಿ ಉಳಿಸುವಂತೆ ವರಿಷ್ಠರು ಸಲಹೆ ಮಾಡಿದ್ದರು. ಷಾ ಪಟ್ಟಿಯಲ್ಲಿ ಯಾರಿದ್ದಾರೆ?:ಗೋಕಾಕ್ ಶಾಸಕ ರಮೇಶ್ ಜರಕಿಹೊಳಿ, ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್, ಯಲ್ಲಾಪುರ ಶಾಸಕರ ಶಿವರಾಂ ಹೆಬ್ಬಾರ್, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್, ಕೆಆರ್ ಪೇಟೆ ಶಾಸಕ ಕೆ.ಸಿ. ನಾರಾಯಣ ಗೌಡ ಅವರ ಹೆಸರನ್ನು ಅಮಿತ್ ಶಾ ಅಂತಿಮಗೊಳಿಸಿದ್ದಾರೆ.

ನಾಲ್ವರು ಶಾಸಕರಿಗಿಲ್ಲ ಸಚಿವ ಸ್ಥಾನ?: ಆದರೆ ಸಂಪುಟ ವಿಸ್ತರಣೆಯ ಸಂಭ್ರಮ ಎಲ್ಲ ಅರ್ಹ ಶಾಸಕರಿಗೂ ಸಿಗುವುದು ಅನುಮಾನ. ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮತ್ತು ವಿಜಯನಗರ ಶಾಸಕ ಆನಂದ್ ಸಿಂಗ್ ಅವರಿಗೆ ಅಮಿತ್ ಶಾ ಪಟ್ಟಿ ಆಘಾತ ನೀಡಲಿದೆ. ಈ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

Facebook Comments