ಮಂತ್ರಿ ಕುರ್ಚಿ ಕನಸು ಕಾಣುತ್ತಿದ್ದವರ ಮನಸಲ್ಲಿ ಮಡುಗಟ್ಟಿದ ಅಸಮಾಧಾನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.28- ಭಾರೀ ನಿರೀಕ್ಷೆಯೊಂದಿಗೆ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಗೆದ್ದು ಇನ್ನೇನು ಸಚಿವರಾಗಿ ಬಿಡುತ್ತೇವೆ ಎಂದು ಮನಸ್ಸಿನಲ್ಲಿ ಮಂಡಿಗೆ ಮೇಯ್ದಿದ್ದ ನೂತನ ಶಾಸಕರಲ್ಲಿ ಅಸಮಾಧಾನ ಮಡುಗಟ್ಟಿದೆ. ಚುನಾವಣೆ ಗೆದ್ದು 24 ಗಂಟೆಯೊಳಗೆ ನಿಮ್ಮನ್ನೆಲ್ಲ ಮಂತ್ರಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಫಲಿತಾಂಶ ಪ್ರಕಟಗೊಂಡು ಒಂದೂವರೆ ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಎಂಬುದು ಗಗನ ಕುಸುಮವಾಗಿಯೇ ಉಳಿದಿದೆ.

ಇದು ನೂತನ ಶಾಸಕರಲ್ಲಿ ಭಾರೀ ಅಸಮಾಧಾನ ತಂದಿದ್ದು, ಬಾಯ್ಬಿಟ್ಟು ಹೇಳಿಕೊಳ್ಳುವಂತೆಯೂ ಇಲ್ಲ, ಒಳಗೆ ನುಂಗುವಂತೆಯೂ ಇಲ್ಲ ಎಂಬಂತಾಗಿದೆ. ಬಹುತೇಕ ಶಾಸಕರು ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಿದ್ದು , ಯಾವ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಸೇರಿದೆವೋ ಅದು ಒಂದೂವರೆ ತಿಂಗಳಿನಲ್ಲೇ ನಮ್ಮೆಲ್ಲ ಆಸೆ ಆಕಾಂಕ್ಷಿಗಳಿಗೆ ತಣ್ಣೀರೆರಚಿದೆ ಎಂದು ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ.

ಹಾಗೆ ನೋಡಿದರೆ ನಮಗೆ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಬೇಕಾದ ಪರಿಸ್ಥಿತಿ ಏನು ಇರಲಿಲ್ಲ. ಮಂತ್ರಿ ಸ್ಥಾನ ನೀಡಲಿಲ್ಲ ಎಂಬುದು ಒಂದು ಕಡೆಯಾದರೆ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ, ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಅಸಮಾಧಾನ ಇದ್ದದ್ದು ನಿಜ.ನಮಗೆ ಮಂತ್ರಿ ಸ್ಥಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ಅವರ ಮೇಲೆ ನಂಬಿಕೆ ಇಟ್ಟೆ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆವು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಮಾತೃ ಪಕ್ಷವನ್ನು ಏಕೆ ಬಿಟ್ಟೆವು ಎಂಬ ನೋವು ಕಾಡುತ್ತಿದೆ ಎಂದು ಬಹುತೇಕರು ಒಳಗೊಳಗೆ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಯಡಿಯೂರಪ್ಪನವರ ಮೇಲೆ ನಮಗೆ ಈಗಲೂ ನಂಬಿಕೆ ಇದೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದರಲ್ಲಿ ನಮಗೆ ಯಾವ ಸಂಶವೂ ಇಲ್ಲ. ಆದರೆ ಬಿಜೆಪಿಯಲ್ಲಿರುವ 2ನೇ ಹಂತದ ನಾಯಕರ ನಡವಳಿಕೆಗಳೇ ಬೇಸರ ತಂದಿವೆ ಎಂದು ಅನೇಕ ಶಾಸಕರು ತಮ್ಮ ನೋವು ಹೊರಹಾಕುತ್ತಿದ್ದಾರೆ.

ನಮ್ಮನ್ನು 24 ಗಂಟೆಯೊಳಗೆ ಮಂತ್ರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರಿಂದಲೇ ಮತದಾರರು ಭಾರೀ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಇಂದು ಕ್ಷೇತ್ರಕ್ಕೆ ಕಾಲಿಟ್ಟರೆ ಯಾವಾಗ ಮಂತ್ರಿಯಾಗುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ನಮಗೂ ಸಬೂಬು ಹೇಳಿ ಸಾಕಾಗಿಹೋಗಿದೆ. ನಮ್ಮ ಪರಿಸ್ಥಿತಿ ಯಾರಿಗೂ ಬರಬಾರದಿತ್ತೆಂದು ಅಳಲು ತೋಡಿಕೊಂಡಿದ್ದಾರೆ.

ಉಪಚುನಾವಣೆಯಲ್ಲಿ ನಮ್ಮ ವಿರುದ್ಧ ವಿರೋಧ ಪಕ್ಷದವರು ಎಂಥೆಂಥ ಆರೋಪಗಳನ್ನು ಮಾಡಿದರೂ ಅವೆಲ್ಲವನ್ನೂ ಮೆಟ್ಟಿ ನಿಂತು ಗೆದ್ದು ಬಂದಿದ್ದೇವೆ. ಹೈಕಮಾಂಡ್ ನಾಯಕರು ಮುಖ್ಯಮಂತ್ರಿಗಳನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ನಮ್ಮ ಸಹನೆಯ ಕಟ್ಟೆ ಒಡೆಯುವ ಮೊದಲೇ ಇದಕ್ಕೊಂದು ಇತ್ಯರ್ಥ ಕಾಣಿಸಬೇಕೆಂದು ಬಹುತೇಕ ಶಾಸಕರು ಮನವಿ ಮಾಡಿದ್ದಾರೆ.

Facebook Comments

Sri Raghav

Admin