ಸಂಪುಟ ವಿಸ್ತರಣೆಗೆ ಕ್ಷಣಗಣನೆ, ದವಳಗಿರಿ ಸುತ್ತ ಸಚಿವಾಕಾಂಕ್ಷಿಗಳ ಪೆರೇಡ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.5- ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಕೊನೆ ಕ್ಷಣದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗಲು ಆಡಳಿತಾರೂಢ ಬಿಜೆಪಿಯಲ್ಲಿ ಲಾಬಿ ಬಿರುಸಾಗಿದೆ. ಶತಾಯ-ಗತಾಯ ಈ ಬಾರಿ ಸಂಪುಟಕ್ಕೆ ಸೇರ್ಪಡೆಯಾಗಲೇಬೇಕೆಂದು ಬಿಗಿಪಟ್ಟು ಹಿಡಿದಿರುವ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ನಾಳೆ ಸಂಪುಟ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ದವಳಗಿರಿಯ ನಿವಾಸಕ್ಕೆ ಆಕಾಂಕ್ಷಿಗಳ ದಂಡೇ ಹರಿದುಬಂದಿತ್ತು. ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಹಾವೇರಿಯ ನೆಹರು ಓಲೇಕರ್, ಮಾಜಿ ಸಚಿವ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರರು ಆಗಮಿಸಿದ್ದರು. ಇದರ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟ್ವೀಟ್ ಮಾಡಿದ್ದು, ಯಡಿಯೂರಪ್ಪ ನಮ್ಮ ನಾಯಕರು, ಅವರ ನಾಯಕತ್ವ, ಪಕ್ಷ ಮತ್ತು ಸರ್ಕಾರದ ವಿರುದ್ಧ ಯಾರೂ ದನಿ ಎತ್ತಿಲ್ಲ, ಎತ್ತುವುದೂ ಇಲ್ಲ. ಸೋತವರಿಗೆ ಮಂತ್ರಿಸ್ಥಾನ ನೀಡುತ್ತ ಹೋದರೆ ಪಕ್ಷಕ್ಕೆ ಮುಜುಗರವಾಗುತ್ತದೆ.

ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗದವರಿಗೆ ಅವಕಾಶ ನೀಡಿ ಪ್ರಾದೇಶಿಕ ಸಮತೋಲನ ಕಾಪಾಡಬೇಕಿದೆ ಎಂದು ಪರೋಕ್ಷವಾಗಿ ಸಂಪುಟ ವಿಸ್ತರಣೆಗೆ ಆಸಮಾಧಾನ ಹೊರಹಾಕಿದ್ದಾರೆ.  ಇತ್ತ ವಿಜಾಪುರದಲ್ಲಿ ಮಾತನಾಡಿರುವ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಸೋತವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪಕ್ಷದ ನಿಷ್ಠಾವಂತರನ್ನು ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.

ಹಾವೇರಿಯ ನೆಹರು ಓಲೇಕರ್ ಶತಾಯ-ಗತಾಯ ಸಂಪುಟಕ್ಕೆ ಸೇರ್ಪಡೆಯಾಗಲು ಕಳೆದ ಎರಡು ದಿನಗಳಿಂದ ನಿರಂತರವಾಗಿ ಬಿಎಸ್‍ವೈ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ. ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಮಂತ್ರಿಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.  ಕಳೆದೆರಡು ದಿನಗಳಿಂದ ಶಾಸಕರ ಭವನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಸಭೆ ನಡೆಸಿದ್ದ ಸುರಪುರದ ಶಾಸಕ ರಾಜುಗೌಡ ನಾಯಕ್ ಮತ್ತಿತರರು ತುಸು ಮೆತ್ತಗಾದಂತೆ ಕಂಡುಬರುತ್ತಿದೆ.

ಯಾವುದೇ ಸಭೆಗಳನ್ನು ನಡೆಸಬಾರದೆಂದು ಪಕ್ಷ ಕೊಟ್ಟ ಸೂಚನೆ ಹಿನ್ನೆಲೆಯಲ್ಲಿ ಸದ್ಯ ಅಸಮಾಧಾನಿತರು ಮೆತ್ತಗಾಗಿದ್ದರೂ ಒಳಗೊಳಗೇ ಕುದಿಯುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಸಿ.ಪಿ.ಯೋಗೇಶ್ವರ್‍ಗೆ ಮಂತ್ರಿಸ್ಥಾನ ನೀಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

Facebook Comments