ನಾಳೆ 10 ಮಂದಿಗೆ ಮಾತ್ರ ಸಚಿವ ಸ್ಥಾನ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.5- ಕೊನೆ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ನಾಳೆ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೇವಲ 10 ಮಂದಿ ಶಾಸಕರು ಮಾತ್ರ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿದೆ.  ಈವರೆಗೂ 10+3 ಮಾದರಿಯಲ್ಲಿ ವಿಸ್ತರಣೆಯಾಗಲಿದ್ದು, ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ 10 ಮಂದಿ ಹಾಗೂ ಮೂಲ ಬಿಜೆಪಿಯ ಮೂವರು ಶಾಸಕರು ಸೇರಿದಂತೆ ಒಟ್ಟು 13 ಶಾಸಕರು ನಾಳೆ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು.

ಆದರೆ, ಇದೀಗ ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವಂತೆ ನಾಳೆ ನಡೆಯಲಿರುವ ವಿಸ್ತರಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಗೆದ್ದಿರುವ 10 ಮಂದಿ ಮಾತ್ರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಗುಸು ಗುಸು ಹಬ್ಬಿದೆ.

ಮೂಲ ಬಿಜೆಪಿಯಿಂದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರುಗಳು ಈವರೆಗೂ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯಲ್ಲಿದ್ದವು. ಆದರೆ, ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಿಎಸ್‍ವೈ ಅವರಿಗೆ ದೂರವಾಣಿ ಕರೆ ಮಾಡಿ 10 ಮಂದಿಯನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಪಚುನಾವಣೆಯಲ್ಲಿ ಗೆದ್ದಿರುವ 10 ಮಂದಿ ಶಾಸಕರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಬೇಕು. ಮೂಲ ಬಿಜೆಪಿಯಿಂದ ಯಾರಿಗೂ ಸಚಿವ ಸ್ಥಾನ ನೀಡದಂತೆ ಬಿಎಸ್‍ವೈಗೆ ಷಾ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.  ಅದರಲ್ಲೂ ಚನ್ನಪಟ್ಟಣದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‍ಗೆ ಮಂತ್ರಿಸ್ಥಾನ ನೀಡಲು ಮೂಲ ಬಿಜೆಪಿಯಲ್ಲೇ ತೀವ್ರ ವಿರೋಧವಾಗಿತ್ತು.
ಈಗಾಗಲೇ ಸೋತ ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡುವುದರ ಜತೆಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಪುನಃ ಯೋಗೇಶ್ವರ್‍ಗೆ ಮಂತ್ರಿಸ್ಥಾನ ಕೊಟ್ಟರೆ ಮೂಲ ಬಿಜೆಪಿಗರ ಗತಿ ಏನು ಎಂದು ಅನೇಕರು ಕಿಡಿಕಾರಿದ್ದರು.

ಇದು ತೀವ್ರಸ್ವರೂಪ ಪಡೆದುಕೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕೇಂದ್ರ ವರಿಷ್ಠರು ಸದ್ಯ 10 ಮಂದಿಗೆ ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಲು ಹಸಿರು ನಿಶಾನೆ ತೋರಿದ್ದಾರೆ.
ವರಿಷ್ಠರ ಸೂಚನೆಯನ್ನು ಯಡಿಯೂರಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳಾದ ಉಮೇಶ್ ಕತ್ತಿ, ಲಿಂಬಾವಳಿ ಮತ್ತು ಯೋಗೀಶ್ವರ್‍ಗೆ ತಿಳಿಸಿದ್ದಾರೆಂದು ತಿಳಿದುಬಂದಿದೆ.ಇಂದು ಬೆಳಗ್ಗೆ ತಮ್ಮ ನಿವಾಸಕ್ಕೆ ಕರೆಸಿಕೊಂಡು ಕೇಂದ್ರದ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ ವಲಸಿಗರಿಗೆ ನಾಳೆ ಸಂಪುಟದಲ್ಲಿ ಮಣೆ ಹಾಕಿದ್ದೇ ನಿಜವಾದರೆ ಮೂಲ ಬಿಜೆಪಿಗರ ನಡೆ ಇನ್ನಷ್ಟು ಕುತೂಹಲ ಕೆರಳಿಸಲಿದೆ. ನಾಳೆ ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ 10 ಮಂದಿ ನೂತನ ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲ ವಿ.ಆರ್. ವಾಲಾ ಅವರು, ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸುವರು. ಯಡಿಯೂರಪ್ಪ ಸಂಪುಟ ಸೇರುವವರು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.

ಮೂಲ ಬಿಜೆಪಿಯಲ್ಲಿ ಎಷ್ಟು ಶಾಸಕರು? ಉಪಚುನಾವಣೆಯಲ್ಲಿ ಗೆದ್ದ ಎಷ್ಟು ಶಾಸಕರು ಸಚಿವರಾಗಲಿದ್ದಾರೆ? ಎಂಬುದು ಈ ಕ್ಷಣದವರೆಗೂ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇನ್ನು ಸಂಪುಟ ವಿಸ್ತರಣೆಯೇ ಅಥವಾ ಪುನಾರಚನೆಯೇ ಎಂಬುದರ ಬಗ್ಗೆ ಮುಖ್ಯಮಂತ್ರಿಯವರು ನೂತನ ಸಚಿವರಾಗಿಯಾರೆಲ್ಲ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ.

ಉಪಚುನಾವಣೆಯಲ್ಲಿ ಸೋತಿರುವ ಹೆಚ್. ವಿಶ್ವನಾಥ್ ಅವರೂ ಸಹ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಬಗ್ಗೆ ಅವರ ಗಮನ ಸೆಳೆದಾಗ, ಸುಪ್ರೀಂಕೋರ್ಟ್‍ನ ತೀರ್ಪಿನ ಹಿನ್ನೆಲೆಯಲ್ಲಿ ಸೋತವರನ್ನು ಸಚಿವರನ್ನಾಗಿ ಮಾಡಲಿಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ವಿಶ್ವನಾಥ್ ಹಾಗೂ ಎಂ.ಟಿ.ಬಿ. ನಾಗರಾಜು ಅವರಿಗೆ ಸಚಿವ ಸ್ಥಾನದ ಭಾಗ್ಯಇಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿಯವರೇ ಖಚಿತಪಡಿಸಿದ್ದಾರೆ.

ಉಪ ಚುನಾವಣೆಯಲ್ಲಿಎಂ.ಟಿ.ಬಿ.ನಾಗರಾಜ್ ಮತ್ತುಎಚ್. ವಿಶ್ವನಾಥ್ ಸೋಲು ಕಂಡಿದ್ದಾರೆ. ಆರ್. ಶಂಕರ್ ಅವರನ್ನು ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಫೆಬ್ರವರಿ 17ರಂದು ನಡೆಯುವ ಪರಿಷತ್ ಉಪ ಚುನಾವಣೆಗೆ ಆರ್. ಶಂಕರ್ ಟಿಕೆಟ್ ಆಕಾಂಕ್ಷಿಯಾಗಿದ್ದರು.  ಆದರೆ, ಪಕ್ಷವು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಿದೆ. ಇನ್ನು ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಸಿಎಂ ಯಡಿಯೂರಪ್ಪಗೊಂದಲ ಉಂಟಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಸಹಕಾರ ಖಾತೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಕೆ.ಆರ್.ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ್ ಅವರಿಗೆ ಅರಣ್ಯಖಾತೆ, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯಅವರಿಗೆ ಬೆಂಗಳೂರು ಹೊರತುಪಡಿಸಿ ನಗರಾಭಿವೃದ್ಧಿಖಾತೆ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ, ನಾಳೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಶಾಸಕರಾದ ಡಾ.ಕೆ.ಸುಧಾಕರ್ ಹಾಗೂ ಉಮೇಶ್‍ಕತ್ತಿ ಅವರು ಸಿಎಂ ನಿವಾಸಕ್ಕೆ ತೆರಳಿ ಯಡಿಯೂರಪ್ಪಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಂಭಾವ್ಯ ಸಚಿವರ ಪಟ್ಟಿ:
ರಮೇಶ್ ಜಾರಕಿಹೊಳಿ (ಗೋಕಾಕ್)
ಎಸ್.ಟಿ. ಸೋಮಶೇಖರ್ (ಯಶವಂತಪುರ)
ಗೋಪಾಲಯ್ಯ (ಮಹಾಲಕ್ಷ್ಮೀಲೇಔಟ್)
ಬೈರತಿ ಬಸವರಾಜು (ಕೆ.ಆರ್.ಪುರಂ)
ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ)
ಬಿ.ಸಿ.ಪಾಟೀಲ್ (ಹಿರೆಕೇರೂರು)
ನಾರಾಯಣಗೌಡ (ಕೆ.ಆರ್.ಪೇಟೆ)
ಶ್ರೀಮಂತ ಪಾಟೀಲ್ (ಕಾಗವಾಡ)
ಶಿವರಾಮ ಹೆಬ್ಬಾರ್ (ಯಲ್ಲಾಪುರ)
ಆನಂದಸಿಂಗ್ (ವಿಜಯನಗರ)

Facebook Comments