ಮತ್ತೆ ಕೇಳಿಬರುತ್ತಿದೆ ಸಂಪುಟ ವಿಸ್ತರಣೆ ಕೂಗು..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.22- ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಯಾಗಬೇಕೆಂಬ ಕೂಗು ಮತ್ತೆ ಬಿಜೆಪಿಯಲ್ಲಿ ಕೇಳಿಬಂದಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲಾ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಇವರಲ್ಲಿ ನಾಲ್ವರು ಬಿಜೆಪಿಯವರಾಗಿದ್ದಾರೆ.  ವಿಧಾನ ಪರಿಷತ್ ಸದಸ್ಯರಾಗಲಿವರುವ ಎಂಟಿಬಿ ನಾಗರಾಜ್, ಆರ್. ಶಂಕರ್ ಯಡಿಯೂರಪ್ಪ ಸಂಪುಟ ಸೇರಲಿದ್ದಾರೆಯೇ? ಎಂಬುದು ಯಕ್ಷಪ್ರಶ್ನೆಯಾಗಿದೆ.

ಸಂಪುಟದಲ್ಲಿ ಸದ್ಯ 5 ಸಚಿವ ಸ್ಥಾನಗಳು ಖಾಲಿ ಇವೆ. ಬಿಜೆಪಿಯ ಕೆಲವು ಶಾಸಕರು ಆಕಾಂಕ್ಷಿಗಳು ಎಂಬುದು ಗುಟ್ಟಾಗಿ ಉಳಿದಿಲ್ಲ. ಈಗ ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯೂ ಆರಂಭವಾಗಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಚಿವ ಸ್ಥಾನವನ್ನು ಬಿಟ್ಟು ಬಂದ ಇಬ್ಬರೂ ನಾಯಕರಿಗೆ ಈಗ ಸಚಿವ ಸ್ಥಾನ ನೀಡಬೇಕು ಎಂಬ ಮಾತಿದೆ. ಆದರೆ, ಕುರುಬ ಸಮುದಾಯಕ್ಕೆ ಸೇರಿದ ಇಬ್ಬರು ಈಗಾಗಲೇ ಯಡಿಯೂರಪ್ಪನ ಸಂಪುಟದಲ್ಲಿದ್ದಾರೆ.

ಸರ್ಕಾರ ಬಂದು ವರ್ಷ ಪೂರೈಸಿದಾಗ ಸಚಿವರ ಕಾರ್ಯ ವೈಖರಿ ಆಧಾರದಲ್ಲಿ ಕೆಲವರನ್ನು ಕೈ ಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಬಗ್ಗೆಯೂ ಪಕ್ಷದ ವಲಯದಲ್ಲಿ ಚರ್ಚೆ ನಡೆದಿತ್ತು. ಈಗ ಈ ಚರ್ಚೆ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.

ವಿಧಾನ ಪರಿಷತ್ ಸದಸ್ಯರಾಗಲಿರುವ ಆರ್. ಶಂಕರ್, ಎಂಟಿಬಿ ನಾಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಇನ್ನೂ ಎರಡು ಸ್ಥಾನಕ್ಕೆ ಮೂಲ ಬಿಜೆಪಿ ಶಾಸಕರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಉಮೇಶ್ ಕತ್ತಿ ಈ ಬಾರಿ ಸಚಿವರಾಗುವುದು ಖಚಿತ ಎಂಬುದು ಅವರ ಆಪ್ತ ವಲಯದಲ್ಲಿ ಕೇಳಿಬಂದಿದೆ.

ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರದ ಉಪಚುನಾವಣೆ ಇನ್ನೂ ನಡೆದಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಅದಕ್ಕಾಗಿ ಒಂದು ಸ್ಥಾನವನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಸರ್ಕಾರ ಬರಲು ಕಾರಣರಾದ ಶಾಸಕರು ಒಂದು ಕಡೆಯಾದರೆ ಮೂಲ ಬಿಜೆಪಿ ಶಾಸಕರು ಮತ್ತೊಂದು ಕಡೆ.

ಸಂಪುಟ ವಿಸ್ತರಣೆಯ ಚರ್ಚೆ ಆರಂಭವಾದರೆ ಮೂಲ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದು ಖಚಿತವಾಗಿದೆ. ಸಂಪುಟ ವಿಸ್ತರಣೆ ಅಂದುಕೊಂಡಷ್ಟು ಸುಲಭವಿಲ್ಲ ಎಂಬುದು ಬಿಜೆಪಿ ನಾಯಕರಿಗೂ ತಿಳಿದಿದೆ.

ಸಚಿವ ಸಂಪುಟ ಸೇರುವ ಆಸೆ ಇರುವವರು ಕಾಯಬೇಕಾದ ಸಾಧ್ಯತೆ ಇದೆ. ಬಿಜೆಪಿ ಹೈಕಮಾಂಡ್ ಡಿಸೆಂಬರ್ ತನಕ ಸಂಪುಟ ವಿಸ್ತರಣೆ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

Facebook Comments