ಸಂಪುಟ ವಿಸ್ತರಣೆಯಾಗಿ ವಾರ ಕಳೆದರು ತಣ್ಣಗಾಗದ ಆಕಾಂಕ್ಷಿಗಳ ಕೋಪ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.18-ಸಚಿವ ಸಂಪುಟ ವಿಸ್ತರಣೆಯಾಗಿ ವಾರಗಳೇ ಕಳೆಯುತ್ತಾ ಬಂದಿದ್ದರೂ ಅಸಮಾಧಾನಿತ ಶಾಸಕರ ಕೋಪ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ರಾಜ್ಯ ನಾಯಕರ ಜೊತೆ ಚರ್ಚಿಸಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸ್ಪಷ್ಟ ಸೂಚನೆ ಕೊಟ್ಟಿದ್ದರೂ ಭಿನ್ನಮತೀಯ ಶಾಸಕರು ದೆಹಲಿಗೆ ದೌಡಾಯಿಸಲು ಸಜ್ಜಾಗಿದ್ದಾರೆ.

ಒಂದೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಸಭೆ ಸೇರಲಿರುವ ಸಮಾನಮನಸ್ಕ ಶಾಸಕರು, ನಂತರ ಪರಿಸ್ಥಿತಿ ನೋಡಿಕೊಂಡು ದೆಹಲಿ ವರಿಷ್ಠರನ್ನು ಭೇಟಿಯಾಗಲು ಮುಂದಾಗಿದ್ದಾರೆ.
ಈಗಾಗಲೇ ಹಲವು ಶಾಸಕರು ತಮ್ಮ ನೋವನ್ನು ಬಹಿರಂಗವಾಗಿ ತೋಡಿಕೊಂಡಿದ್ದು ಇದೀಗ ದೆಹಲಿ ಯಾತ್ರೆಗೆ ಸಜ್ಜಾಗುತ್ತಿದ್ದಾರೆ. ಶಾಸಕರಾದ ಎಂಪಿ ರೇಣುಕಾಚಾರ್ಯ, ಅರವಿಂದ್ ಬೆಲ್ಲದ್ ಸೇರಿದಂತೆ ಕೆಲವು ಅತೃಪ್ತ ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಅತೃಪ್ತಿ ಹೊರಹಾಕಲಿದ್ದಾರೆ.

ಕೆಲವು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ನೋವಿನ ಜೊತೆಗೆ ನಾಯಕತ್ವದ ಬಗ್ಗೆಯೂ ವರಿಷ್ಠರಲ್ಲಿ ದೂರು ಕೊಡುವ ಉದ್ದೇಶವಿದೆ. ಮತ್ತೆ ಕೆಲವರು ಬಿಎಸ್‍ವೈ ವಿರುದ್ಧ ನಡೆಯುತ್ತಿರುವ ಪಿತೂರಿಯ ಬಗ್ಗೆ ವರಿಷ್ಠರ ಗಮನ ಸೆಳೆಯುವ ಉದ್ದೇಶ ಹೊಂದಿದ್ದಾರೆ. ಸಿ.ಡಿ ವಿಚಾರ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರಬಹುದು.

ಪಕ್ಷದ ಶಾಸಕರೇ ಬಹಿರಂಗವಾಗಿ ಸರ್ಕಾರ ಹಾಗೂ ಸಿಎಂ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ ಪಕ್ಷ ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ತಪ್ಪು ಸಂದೇಶ ರವಾನೆ ಆಗುತ್ತದೆ ಎಂಬುದು ಬಿಎಸ್‍ವೈ ಪರ ಇರುವ ಶಾಸಕರ ವಾದವಾಗಿದೆ. ಈ ನಿಟ್ಟಿನಲ್ಲಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ದೂರು ಕೊಡುವ ಚಿಂತನೆಯಲ್ಲಿದ್ದಾರೆ. ಅಲ್ಲದೆ ಸಿ.ಪಿ ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು ಈ ಬಗ್ಗೆಯೂ ವರಿಷ್ಠರ ಗಮನಕ್ಕೆ ತರಲಿದ್ದಾರೆ.

ರಾಜ್ಯಕ್ಕೆ ಶನಿವಾರ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡುವ ಉದ್ದೇಶವನ್ನು ಅತೃಪ್ತರು ಹೊಂದಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ದೆಹಲಿಗೆ ತೆರಳಿ ತಮ್ಮ ಅತೃಪ್ತಿಯನ್ನು ಹೊರಹಾಕುವುದು ಕೆಲವು ಶಾಸಕರು ಯೋಚನೆ ಆಗಿದೆ. ಎಂಪಿ ರೇಣುಕಾಚಾರ್ಯ, ಅರವಿಂದ್ ಬೆಲ್ಲದ್ ದೆಹಲಿ ಯಾತ್ರೆ ಫಿಕ್ಸ್ ಆಗಿದ್ದು ಇವರಿಗೆ ಮತ್ತಷ್ಟು ಶಾಸಕರು ಸಾಥ್ ನೀಡುವ ಸಾಧ್ಯತೆ ಇದೆ.

Facebook Comments