ಉಪಚುನಾವಣೆಗೆ ಸುಪ್ರೀಂ ಬ್ರೇಕ್ ಹಾಕಿದ ಬೆನ್ನಲ್ಲೇ ಶುರುವಾಯ್ತು ಸಂಪುಟ ವಿಸ್ತರಣೆಯ ಗುಸುಗುಸು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.27- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ಜು.27ರಂದು ತಮ್ಮ ಸಂಪುಟಕ್ಕೆ 17 ಮಂದಿ ಸಚಿವರನ್ನು ತೆಗೆದುಕೊಂಡಿದ್ದರು.

ಇದೀಗ ಅನರ್ಹಗೊಂಡಿರುವ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಗೆದ್ದರೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಏಕೈಕ ಕಾರಣಕ್ಕಾಗಿಯೇ 16 ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದರು. ಶಾಸಕರ ಅನರ್ಹತೆ ಕುರಿತಂತೆ ಅ.22ರ ನಂತರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುವುದಾಗಿ ನ್ಯಾಯಾಲಯ ಹೇಳಿರುವ ಕಾರಣ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬ ಕೂಗು ಈಗ ಕೇಳಿಬಂದಿದೆ.

ಕಳೆದ ಬಾರಿ ಸಂಪುಟ ವಿಸ್ತರಣೆಯಾದ ನಂತರ ಸಚಿವ ಸ್ಥಾನ ಕೈ ತಪ್ಪಿದ ಕೆಲವರು ಮುನಿಸಿಕೊಂಡಿದ್ದರು. ಶಾಸಕರಾದ ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ರಾಜುಗೌಡ ನಾಯಕ್ ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ , ಕೆ.ಜಿ.ಬೋಪಯ್ಯ ಸೇರಿದಂತೆ ಅನೇಕರು ಮುನಿಸಿಕೊಂಡಿದ್ದರು. ಇದರ ಜೊತೆಗೆ ಪ್ರಬಲ ಖಾತೆ ಸಿಗದವರು ಕೂಡ ಒಳಗೊಳಗೆ ಕುದಿಯುತ್ತಿದ್ದರು. ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಯಾರಿಗೂ ಬಗ್ಗಲೇ ಬೇಡಿ.

ಸಚಿವ ಸ್ಥಾನ ವಂಚಿತರ ಇಲ್ಲವೇ ನಿರೀಕ್ಷಿತ ಖಾತೆಗಳು ಸಿಕ್ಕಿಲ್ಲ ಎಂದು ಮುನಿಸಿಕೊಂಡವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಒಂದು ವೇಳೆ ಬಂಡಾಯ ಸಾರಿದರೆ ಅಂಥವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿತ್ತು. ಹೀಗಾಗಿ ಎಲ್ಲ ಶಾಸಕರು ಬಾಯಿಗೆ ಬೀಗ ಹಾಕಿಕೊಂಡಿದ್ದರು. ಈಗ ಚುನಾವಣಾ ಆಯೋಗವೇ ತಡೆಯಾಜ್ಞೆ ನೀಡಿರುವುದರಿಂದ ಸಂಪುಟ ವಿಸ್ತರಣೆ ಮಾಡುವಂತೆ ಯಡಿಯೂರಪ್ಪನವರ ಮೇಲೆ ಕೆಲ ಶಾಸಕರು ಒತ್ತಡ ಹಾಕಿದ್ದಾರೆ.

ಅನೇಕ ಜಿಲ್ಲೆಗಳಿಗೆ ಈಗಲೂ ಸೂಕ್ತವಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಸಂಪುಟ ವಿಸ್ತರಣೆ ಮಾಡುವುದರಿಂದ ಮುನಿಸಿಕೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸಚಿವರಿದ್ದರೆ ಸಮಸ್ಯೆಗಳಾದರೂ ಪರಿಹಾರವಾಗಬಹುದೆಂಬ ಅಭಿಪ್ರಾಯವನ್ನು ಮುಖ್ಯಮಂತ್ರಿಗಳ ಮುಂದೆ ಶಾಸಕರು ವ್ಯಕ್ತಪಡಿಸಿದ್ದಾರೆ.

ನನಗೇನು ಸಂಪುಟ ವಿಸ್ತರಣೆ ಮಾಡಬೇಕೆಂಬ ಇಚ್ಛೆಯಿದೆ. ಆದರೆ ಅನರ್ಹಗೊಂಡ ಶಾಸಕರು ತ್ಯಾಗ ಮಾಡಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಾಗಿದೆ. ನಾವು ಅವರನ್ನು ದೂರ ಇಟ್ಟರೆ ವಚನ ಭ್ರಷ್ಟ ಆರೋಪಕ್ಕೆ ಸಿಲುಕುತ್ತೇವೆ. ಹಿಂದೆ ಜೆಡಿಎಸ್ ನಮಗೆ ಅಧಿಕಾರ ನೀಡದಿದ್ದಾಗ ವಚನ ಭ್ರಷ್ಟ ಪಕ್ಷವೆಂದು ನಾವೇ ಅಪಪ್ರಚಾರ ನಡೆಸಿದ್ದೆವು. ಈಗ ಅನರ್ಹರ ಕೈ ಬಿಟ್ಟರೆ ನಾಳೆ ನಮ್ಮ ಪಕ್ಷಕ್ಕೂ ಈ ಆಪಾದನೆ ತಪ್ಪಿದ್ದಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಯಾರು ಏನೇ ಹೇಳಿದರೂ ಸರಿಯೇ. ನನ್ನನ್ನು ನಂಬಿ ಬಂದವರಿಗೆ ಮೋಸ ಮಾಡಲು ಸಾಧ್ಯವೇ ಇಲ್ಲ. 17 ಶಾಸಕರ ಪೈಕಿ ಕನಿಷ್ಟ 8ರಿಂದ 10 ಮಂದಿಗೆ ಸಂಪುಟದಲ್ಲಿ ಸ್ಥಾನಮಾನ ಕೊಡಲೇಬೇಕು. ಉಳಿದ ಸ್ಥಾನಗಳನ್ನು ಭರ್ತಿ ಮಾಡಲು ಅಭ್ಯಂತರವಿಲ್ಲವೆಂದರೆ ನನ್ನದು ಕೂಡ ತಕರಾರು ಇಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

ಆರು ಸ್ಥಾನಗಳನ್ನು ಮಾತ್ರ ಯಾವುದೇ ಕ್ಷಣದಲ್ಲಾದರೂ ಭರ್ತಿ ಮಾಡಲಾಗುವುದು. ಈ ಬಗ್ಗೆ ಹೈಕಮಾಂಡ್‍ಗೂ ನಾನೇ ಮನವರಿಕೆ ಮಾಡುತ್ತೇನೆ. ಆದರೆ ಅನರ್ಹರಿಗೆ ನಿಗದಿಪಡಿಸಿರುವ ಸ್ಥಾನಗಳನ್ನು ಮಾತ್ರ ಯಾರೊಬ್ಬರು ಕೇಳಲೇಬಾರದು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಮೂಲಗಳ ಪ್ರಕಾರ ಅಧಿವೇಶನ ಮುಗಿಯುವುದರೊಳಗೆ ಇಲ್ಲವೇ ನಂತರವೇ ಸಚಿವ ಸಂಪುಟ ವಿಸ್ತರಣೆಗೆ ಕೈ ಹಾಕುವ ಸಾಧ್ಯತೆ ಇದೆ.

Facebook Comments

Sri Raghav

Admin