ಬಿಗ್ ನ್ಯೂಸ್ : ಯಡಿಯೂರಪ್ಪನವರ & ಟೀಮ್ ರೆಡಿ, ಸಂಪುಟ ಸಚಿವರಾಗಿ 17 ಶಾಸಕರು ಪ್ರಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20-ಸಮ್ಮಿಶ್ರ ಸರ್ಕಾರ ಪತನವಾದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ 25 ದಿನಗಳ ಬಳಿಕ ಬಿ.ಎಸ್.ಯಡಿಯೂರಪ್ಪನವರ ಸಂಪುಟಕ್ಕೆ ಇಂದು 17 ಸಚಿವರು ಸೇರ್ಪಡೆಯಾಗುವ ಮೂಲಕ ಹಲವು ದಿನಗಳ ಗೊಂದಲಕ್ಕೆ ತೆರೆ ಬಿದ್ದಿದೆ.

ಕೊನೆ ಕ್ಷಣದವರೆಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಸಚಿವರ ಪಟ್ಟಿಗೆ ಕಳೆದ ತಡರಾತ್ರಿ ಕೇಂದ್ರ ಬಿಜೆಪಿ ವರಿಷ್ಠರು ಅಂತಿಮ ಮುದ್ರೆ ಒತ್ತಿದ ಬಳಿಕ 17 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಮತಕೊಟ್ಟಿದ್ದ ವೀರಶೈವ-ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಜಾತಿ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಸಂಪುಟದಲ್ಲಿ ಆದ್ಯತೆ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿ ಸಮತೋಲನದ ಸಂಪುಟ ರಚನೆಯಾಗಿದೆ.

ಇಂದು ಬೆಳಗ್ಗೆ 10.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರ ಗೌಪ್ಯತೆ ಬೋಧಿಸಿದರು. ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನೆರೆದಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಜೈಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟಕ್ಕೆ ಸೇರ್ಪಡೆಯಾಗಿದ್ದು ವಿಶೇಷವಾಗಿತ್ತು. ರಾಜ್ಯದ ಇತಿಹಾಸದಲ್ಲೇ ಮಾಜಿ ಮುಖ್ಯಮಂತ್ರಿಯೊಬ್ಬರು ಪುನಃ ಸಂಪುಟಕ್ಕೆ ಸೇರ್ಪಡೆಯಾದ ಅಪರೂಪದ ನಿದರ್ಶನ ಇದಾಗಿದೆ.

ಬಿ.ಎಸ್.ಯಡಿಯೂರಪ್ಪನವರ ಸಂಪುಟದಲ್ಲಿ ಏಳು ಮಂದಿ ಲಿಂಗಾಯಿತರು, ಮೂವರು ಒಕ್ಕಲಿಗರು, ಇಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಕುರುಬ, ಬಿಲ್ಲವ, ಲಂಬಾಣಿ ಸಮುದಾಯಕ್ಕೆ ತಲಾ ಒಂದೊಂದು ಮಂತ್ರಿ ಸ್ಥಾನ ನೀಡಲಾಗಿದೆ.

ವೀರಶೈವ ಸಮುದಾಯದಿಂದ ಜಗದೀಶ್ ಶೆಟ್ಟರ್(ಹುಬ್ಬಳ್ಳಿ-ಧಾರವಾಡ ಕೇಂದ್ರ ), ವಿ.ಸೋಮಣ್ಣ (ಗೋವಿಂದರಾಜನಗರ), ಸಿ.ಸಿ.ಪಾಟೀಲ್ (ನರಗುಂದ), ಲಕ್ಷ್ಮಣ್ ಸವದಿ(ಅಥಣಿ), ಬಸವರಾಜ್ ಬೊಮ್ಮಾಯಿ(ಸಿಗ್ಗಾವಿ), ಶಶಿಕಲಾ ಜೊಲ್ಲೆ (ನಿಪ್ಪಾಣಿ), ಜೆ.ಸಿ.ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ).

ಒಕ್ಕಲಿಗ ಸಮುದಾಯದಿಂದ ಆರ್.ಅಶೋಕ್ (ಪದ್ಮನಾಭನಗರ), ಸಿ.ಟಿ.ರವಿ (ಚಿಕ್ಕಮಗಳೂರು) ಹಾಗೂ ಡಾ.ಸಿ.ಎನ್.ಅಶ್ವತ್ಥನಾರಾಯಣ (ಮಲ್ಲೇಶ್ವರಂ). ಪರಿಶಿಷ್ಟ ಸಮುದಾಯದಿಂದ ಗೋವಿಂದ ಕಾರಜೋಳ (ಮುಧೋಳ) ಹಾಗೂ ಎಚ್.ನಾಗೇಶ್ (ಮುಳಭಾಗಿಲು).

ಪರಿಶಿಷ್ಟ ಸಮುದಾಯದಿಂದ ಶ್ರೀರಾಮುಲು (ಮೊಳಕಾಲ್ಮೂರು), ಬ್ರಾಹ್ಮಣ ಕೋಟಾದಲ್ಲಿ ಎಸ್.ಸುರೇಶ್‍ಕುಮಾರ್ (ರಾಜಾಜಿನಗರ), ಕುರುಬ ಸಮುದಾಯದಿಂದ ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ ನಗರ), ಬಿಲ್ಲವ ಸಮುದಾಯದಿಂದ ಕೋಟಾ ಶ್ರೀನಿವಾಸಪೂಜಾರಿ (ಮೇಲ್ಮನೆ), ಲಂಬಾಣಿ ಸಮುದಾಯದಿಂದ ಪ್ರಭುಚೌವ್ಹಾಣ್ (ಔರಾದ್) ಅವರುಗಳನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ.

ಇದರಲ್ಲಿ ಡಾ.ಅಶ್ವತ್ಥನಾರಾಯಣ, ಜೆ.ಸಿ.ಮಾಧುಸ್ವಾಮಿ, ಪ್ರಭುಚೌವ್ಹಾಣ್, ಶಶಿಕಲಾ ಜೊಲ್ಲೆ ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿದ್ದರೆ. ಉಳಿದವರೆಲ್ಲರೂ ಹಳೆ ಮುಖಗಳೇ. ಮೇಲ್ಮನೆಯಿಂದ ಕೋಟಾ ಶ್ರೀನಿವಾಸಪೂಜಾರಿ ಸ್ಥಾನ ಪಡೆದಿದ್ದರೆ, ಮಹಿಳಾ ಕೋಟಾದಲ್ಲಿ ಶಶಿಕಲಾಜೊಲ್ಲೆಗೆ ಮಾತ್ರ ಸ್ಥಾನ ನೀಡಲಾಗಿದೆ.

ಕಳೆದ ತಡ ರಾತ್ರಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಸಚಿವರ ಪಟ್ಟಿಯನ್ನು ಪರಿಷ್ಕøತಗೊಳಿಸಿ ಯಡಿಯೂರಪ್ಪನವರಿಗೆ ಕಳುಹಿಸಿಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಜಾತಿ, ಪ್ರದೇಶವಾರು, ಪಕ್ಷಕ್ಕೆ ಸಲ್ಲಿಸಿದ ಸೇವೆ, ಲಾಬಿ ಇದ್ಯಾವುದನ್ನೂ ಪರಿಗಣಿಸಿಲ್ಲ.

ಮೊದಲಿಗೆ ಪಕ್ಷ ನಿಷ್ಟೆ, ಕ್ಷೇತ್ರದಲ್ಲಿ ಹೊಂದಿರುವ ಜನಸಂಪರ್ಕ, ವೈಯಕ್ತಿಕ ವರ್ಚಸ್ಸು, ಕಳಂಕ ರಹಿತರು, ಚಾರಿತ್ರ್ಯ ಇವೆಲ್ಲವನ್ನೂ ಪರಿಗಣಿಸಿ ವರಿಷ್ಠರು ಸಂಪುಟಕ್ಕೆ ತೆಗೆದುಕೊಳ್ಳಲು ಅಂತಿಮ ಮುದ್ರೆ ಒತ್ತಿದ್ದರು.

ಕೊನೆ ಕ್ಷಣದಲ್ಲಿ ಒಂದೆರಡು ಅಚ್ಚರಿಯ ಹೆಸರುಗಳು ಸೇರ್ಪಡೆಯಾದರೂ ಬಹುತೇಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪನವರ ಕೈ ಮೇಲಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ.  ಜಾತಿ, ಪ್ರದೇಶದ ಆಧಾರದಲ್ಲಿಯೇ ಮಂತ್ರಿ ಸ್ಥಾನದ ಆಯ್ಕೆ ನಡೆದಿದ್ದು, ಅತೃಪ್ತ ಶಾಸಕರನ್ನು ಎರಡನೇ ಹಂತದಲ್ಲಿ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶದಿಂದ ಇನ್ನೂ 16 ಸ್ಥಾನ ಖಾಲಿ ಉಳಿದಿವೆ.

Facebook Comments

Sri Raghav

Admin