ಸಂಪುಟ ವಿಸ್ತರಣೆ : ಇಲ್ಲಿದೆ ಫೈನಲ್ ಆಗಿರುವ ಸಂಭವನೀಯ ಸಚಿವರ ಪಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.12- ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಾಳೆ ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿದ್ದು, ಹೊಸದಾಗಿ 7 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಮಾಜಿ ಸಚಿವರಾದ ಉಮೇಶ್ ಕತ್ತಿ, ರಾಜುಗೌಡ ನಾಯಕ್, ಸಿ.ಪಿ.ಯೋಗೇಶ್ವರ್, ಆರ್. ಶಂಕರ್, ಎಂ.ಟಿ.ಬಿ.ನಾಗರಾಜ್, ಅರವಿಂದ ಲಿಂಬಾವಳಿ ಹಾಗೂ ಎಸ್. ಅಂಗಾರ ಮತ್ತು ಮುನಿರತ್ನ, ಹಾಲಪ್ಪ ಆಚಾರ್ ಸಚಿವರಾಗುವ ಸಂಭವನೀಯ ಪಟ್ಟಿಯಲ್ಲಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ. ಒಂದು ವೇಳೆ ಕೊನೆಕ್ಷಣದಲ್ಲಿ ವರಿಷ್ಠರು ಸಂಪುಟ ರಚನೆ ಜೊತೆಗೆ ಪುನಾರಚನೆಗೂ ಅವಕಾಶ ನೀಡಿದರೆ ಮತ್ತೆ ಬದಲಾವಣೆಯಾಗುವ ಸಾಧ್ಯತೆಯಿದೆ.
ಸಚಿವರಾದ ಎಚ್.ನಾಗೇಶ್, ಸಿ.ಸಿ.ಪಾಟೀಲ್, ಪ್ರಭು ಚವ್ಹಾಣ್, ಕೋಟಾಶ್ರೀನಿವಾಸ್ ಪೂಜಾರಿ ಹಾಗೂ ಶಶಿಕಲಾ ಜೊಲ್ಲೆ ಅವರುಗಳು ಸಚಿವ ಸ್ಥಾನದಿಂದ ಕೋಕ್ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಬಗ್ಗೆ ಸಿಎಂ ಯಡಿಯೂರಪ್ಪ ಇನ್ನೂ ಸುಳಿವು ನೀಡಿಲ್ಲ, ಸದ್ಯ 27 ಸಚಿವರಿದ್ದು, 7 ಸ್ಥಾನಗಳು ಖಾಲಿಯಿವೆ. 7 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಿರುವ ಯಡಿಯೂರಪ್ಪ ಒಂದಿಬ್ಬರು ಸಚಿವರಿಗೆ ಗೇಟ್ ಪಾಸ್ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸಮೀಪಿಸುತ್ತಿದೆ. ಇನ್ನು ಕಳೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುನಿರತ್ನ ಅವರನ್ನು ಸಚಿವರನ್ನಾಗಿಸುವುದಾಗಿ ಪ್ರಚಾರದ ವೇಳೆ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಆದರೆ ಈವರೆಗೂ ಇದು ಖಚಿತವಾಗಿಲ್ಲ. ಮೂಲಗಳ ಪ್ರಕಾರ ಸಂಜೆಯೊಳಗೆ ದೆಹಲಿಯಿಂದ ಸಚಿವರ ಪಟ್ಟಿ ರವಾನೆಯಾಗಲಿದ್ದು, ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಅಧಿಕೃತವಾಗಿ ಪಟ್ಟಿ ನೀಡಲಿದ್ದಾರೆ.  ಈ ಕ್ಷಣದವರೆಗೂ ಸಂಪುಟಕ್ಕೆ ಸೇರ್ಪಡೆಯಾವರರ, ಸ್ಥಾನ ಕಳೆದುವವರ ಹೆಸರುಗಳು ಬಹಿರಂಗಗೊಂಡಿಲ್ಲ. ಈ ಬಾರಿ ಬಿಎಸ್‍ವೈ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಯಿಡುತ್ತಿದ್ದು, ಪ್ರತಿಯೊಂದನ್ನು ಗೌಪ್ಯವಾಗಿಟ್ಟಿದ್ದಾರೆ.

ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಸಿಪಿ ಯೋಗೇಶ್ವರ್ ಮತ್ತು ಉಮೇಶ್ ಕತ್ತಿ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹಲವರು ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎ.ಎಚ್.ವಿಶ್ವನಾಥ್ ಅವರನ್ನು ಸಂಪುಟ ವಿಸ್ತರಣೆಗೆ ಪರಿಗಣಿಸಿಲ್ಲ ಎಂದು ಹೇಳಲಾಗುತ್ತಿದೆ, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಹಾಲಪ್ಪ ಆಚಾರ್, ರಾಜು ಗೌಡ ಮತ್ತು ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರುಗಳು ಸೇರ್ಪಡೆ ಪಟ್ಟಿಯಲ್ಲಿ ಕೇಳಿ ಬರುತ್ತಿವೆ.

ಆಚಾರ್ ಮತ್ತು ಗೌಡ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಉತ್ಸುಕರಾಗಿದ್ದರೇ ಉಮೇಶ್ ಕತ್ತಿ ಮತ್ತು ಲಿಂಬಾವಳಿ ಅವರನ್ನು ಸೇರಿಸಿಕೊಳ್ಳುವಂತೆ ಹೈಕಮಾಂಡ್ ಶಿಪಾರಸ್ಸು ಮಾಡಿದೆ. ಅಬಕಾರಿ ಸಚಿವ ಎಚ್. ನಾಗೇಶ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸಂಪುಟದಿಂದ ಕೈ ಬಿಡಲು ಉದ್ದೇಶಿಸಲಾಗಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.

ನಿನ್ನೆಯವರೆಗೂ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ರಾಜುಗೌಡ ನಾಯಕ್ ಹೆಸರುಗಳು ಕೇಳಿಬಂದಿರಲಿಲ್ಲ. ಆದರೆ ಕಳೆದ ರಾತ್ರಿ ನಡೆದಿರುವ ದಿಢೀರ್ ಬೆಳವಣಿಗೆಯಲ್ಲಿ ಈ ಇಬ್ಬರು ಹೆಸರುಗಳು ಚಾಲ್ತಿಗೆ ಬಂದಿವೆ.  ಮುಖ್ಯಮಂತ್ರಿ ವಿರುದ್ಧ ಪದೇ ಪದೇ ಬಹಿರಂಗ ಹೇಳಿಕೆ ನೀಡಿ ಮುಜುಗರ ಸೃಷ್ಟಿಸುತ್ತಿರುವ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಹೆಸರು ಕೂಡ ಕೇಳಿಬರುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದಿಂದ ಯತ್ನಾಳ್ ಜೊತೆಗೆ ಯಲಬುರ್ಗ ಶಾಸಕ ಹಾಲಪ್ಪ ಆಚಾರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಖುದ್ದು ವರಿಷ್ಠರೇ ಸಿಎಂ ಬಿಎಸ್‍ವೈಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.  ಬಿಎಸ್‍ವೈ ಅವರು ಸಂಪುಟ ಪುನಾರಚನೆ ಮಾಡಬೇಕೆಂದು ಒಲವು ತೋರಿದ್ದಾರೆ. ಕೆಲವು ಸಚಿವರನ್ನು ಕೈಬಿಟ್ಟು ಯುವಕರು ಮತ್ತು ಉತ್ಸಾಹಿಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಆಲೋಚನೆ ಅವರದಾಗಿದೆ. ಹಾಗೊಂದು ವೇಳೆ ಪುನಾರಚನೆಯಾದರೆ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಸುನೀಲ್‍ಕುಮಾರ್, ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವವೂ ಇದೆ.

ಈ ಬಾರಿಯ ಸಂಪುಟದಲ್ಲಿ ಬಿಎಸ್‍ವೈ ತಮ್ಮ ಆಪ್ತರಿಗೆ ಸ್ಥಾನ ಕಲ್ಪಿಸಲು ಕಸರತ್ತು ನಡೆಸುತ್ತಿದ್ದಾರೆ. ಅದಕ್ಕೆ ವರಿಷ್ಠರು ಎಷ್ಟರಮಟ್ಟಿಗೆ ಮಣೆ ಹಾಕುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.  ತಮ್ಮ ಸಂಪುಟಕ್ಕೆ ಸಿಎಂ ಯಡಿಯೂರಪ್ಪ 7 ಶಾಸಕರನ್ನು ಸೇರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದರೂ ಅವರ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಆದರೆ ಬೆಳಗಾವಿ ಶಾಸಕ ಉಮೇಶ್ ಕತ್ತಿ ಇಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಇನ್ನು ಬಾಕಿಯಿರುವ 7 ಸ್ಥಾನಗಳಿಗಾಗಿ 25 ಮಂದಿ ಆಕಾಂಕ್ಷಿಗಳಿದ್ದಾರೆ ಎಂದು ತಿಳಿದು ಬಂದಿದೆ.ಖಚಿತ ಪಡಿಸಿದ ಸಿಎಂ: ನಾಳೆ ಸಂಜೆ 5 ಗಂಟೆಗೆ ರಾಜಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಾಹ್ನ 2 ಗಂಟೆಗೆ ಅಮಾವಾಸ್ಯೆ ಮುಗಿಯಲಿದ್ದು, ನಂತರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎಂಬ ಮಾಧ್ಯಮದವರ ಪ್ರಶ್ನೆಗೆ ಗುಟ್ಟು ಬಿಟ್ಟುಕೊಡದ ಸಿಎಂ, ನೀವು ಕಾದು ನೋಡಿ ಎಲ್ಲವೂ ಬಹಿರಂಗಗೊಳ್ಳಲಿದೆ ಎಂದು ಕುತೂಹಲ ಕೆರಳಿಸಿದರು.

ಅನಗತ್ಯವಾಗಿ ಸಂಪುಟದಿಂದ ಇಂಥವರನ್ನೇ ಕೈಬಿಡುತ್ತೇವೆ ಅಥವಾ ಇಂಥವರನ್ನೇ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಬಿಂಬಿಸಬೇಡಿ. ಸಂಜೆ ನಾನೇ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಈಗ ಮಾಧ್ಯಮಗಳಲ್ಲಿ ಬರುತ್ತಿರುವ ವದಂತಿಗಳು ಸತ್ಯಾಂಶದಿಂದ ಕೂಡಿಲ್ಲ. ಪುನಾರಚನೆಯೋ, ವಿಸ್ತರಣೆಯೋ ಯಾರನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ನಾನೇ ಬಹಿರಂಗ ಮಾಡುತ್ತೇನೆ. ದಯವಿಟ್ಟು ಊಹಾಪೆÇೀಹಗಳನ್ನು ಹಬ್ಬಿಸಬೇಡಿ ಎಂದು ಸಿಎಂ ಮನವಿ ಮಾಡಿದರು.

Facebook Comments