ಸಂಪುಟ ವಿಸ್ತರಣೆ ವೇಳೆ ಜೆಡಿಎಸ್‍ನ ಪರಿಶಿಷ್ಟ ಸಮುದಾಯ ಶಾಸಕರಿಗೆ ಅವಕಾಶ ನೀಡುವಂತೆ ತೀವ್ರ ಒತ್ತಡ..!

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01

ಬೆಂಗಳೂರು,ಅ.20-ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶಾಸಕರಿಗೆ ಜೆಡಿಎಸ್‍ನಲ್ಲಿ ಅವಕಾಶ ಕೊಡಬೇಕು ಎಂಬ ಒತ್ತಡ ತೀವ್ರವಾಗಿದೆ.  ಬಿಎಸ್‍ಪಿಯ ಶಾಸಕ ಎನ್.ಮಹೇಶ್ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಜೆಡಿಎಸ್‍ನಲ್ಲಿ ಎರಡು ಸಚಿವ ಸ್ಥಾನಗಳು ಭರ್ತಿ ಮಾಡಿಕೊಳ್ಳಬಹುದಾಗಿದೆ.  ಮಹೇಶ್ ಅವರು ತಮ್ಮ ಪಕ್ಷದ ಆಂತರಿಕ ವಿಚಾರಗಳಿಂದಾಗಿ ರಾಜೀನಾಮೆ ನೀಡಿದ್ದಾರೆ. ಬಿಎಸ್‍ಪಿಯಿಂದ ಒಬ್ಬರೇ ಶಾಸಕರಾಗಿರುವುದರಿಂದ ಸದ್ಯಕ್ಕೆ ಆ ಪಕ್ಷಕ್ಕೆ ಸಚಿವ ಸ್ಥಾನ ದೊರೆಯುವುದಿಲ್ಲ.

ಪ್ರಸ್ತುತ ರಾಜ್ಯದ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆ ನಡೆಯುತ್ತಿರುವುದರಿಂದ ಸಚಿವ ಸಂಪುಟ ವಿಸ್ತರಣೆ ವಿಚಾರ ಸದ್ಯಕ್ಕೆ ತಣ್ಣಗಾಗಿದೆ. ಆದರೂ ಆಕಾಂಕ್ಷಿಗಳು ಮಾತ್ರ ಪಕ್ಷದ ವರಿಷ್ಠರ ಮುಂದೆ ದುಂಬಾಲು ಬೀಳುವುದು ನಿಲ್ಲಿಸಿಲ್ಲ.  ಹೀಗಾಗಿ ಉಪಚುನಾವಣೆಯ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿದ್ದು, ಆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಶಾಸಕರಿಗೆ ಆದ್ಯತೆ ನೀಡಬೇಕೆಂದು ಜೆಡಿಎಸ್ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ 6 ಮಂದಿ ಎಸ್ಸಿ ಹಾಗೂ ಒಬ್ಬರು ಎಸ್ಟಿ ಶಾಸಕರು ಗೆದ್ದಿದ್ದಾರೆ. ಬಿಎಸ್‍ಪಿಗೆ ಒಂದು ಸಚಿವ ಸ್ಥಾನ ನೀಡಿದ್ದರಿಂದ ಜೆಡಿಎಸ್‍ನ ಯಾವುದೇ ಎಸ್ಸಿ-ಎಸ್ಟಿ ಶಾಸಕರಿಗೆ ಇದುವರೆಗೂ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿರಲಿಲ್ಲ.  ಬಿಎಸ್‍ಪಿಯಿಂದ ತೆರವಾಗಿರುವ ಒಂದು ಸಚಿವ ಸ್ಥಾನವನ್ನು ಎಸ್ಸಿ ವರ್ಗಕ್ಕೆ ನೀಡಬೇಕೆಂಬ ಕೂಗು ಜೆಡಿಎಸ್‍ನಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ. ಮಳವಳ್ಳಿ ಶಾಸಕ ಡಾ.ಅನ್ನದಾನಿ, ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಎಚ್.ಕೆ.ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪಕ್ಷದಲ್ಲಿ ಹಿರಿಯ ಶಾಸಕರು ಕೂಡ ಆಗಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ರಚನೆ ಸಂದರ್ಭದಲ್ಲಿ ಇವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತಾದರೂ ಸಚಿವ ಸ್ಥಾನ ದೊರೆತಿರಲಿಲ್ಲ.  ಅನ್ನದಾನಿ ಅವರು ಎರಡನೇ ಬಾರಿಗೆ ಶಾಸಕರಾಗಿದ್ದು, ಅವರೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‍ನ ಎಸ್ಸಿ-ಎಸ್ಟಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ನೆಲಮಂಗಲದ ಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.  ಅಶ್ವಿನ್‍ಕುಮಾರ್, ನಾರಾಯಣಸ್ವಾಮಿ, ದೇವಾನಂದ ಚೌವ್ಹಾಣ್ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಹೀಗಾಗಿ ಇವರಿಗೆ ಸಚಿವ ಸ್ಥಾನ ಸಾಧ್ಯತೆಗಳು ವಿರಳ.

ಜೆಡಿಎಸ್‍ನಲ್ಲಿ ಅನ್ನದಾನಿ ಮತ್ತು ಎಚ್.ಕೆ.ಕುಮಾರಸ್ವಾಮಿ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದ್ದು, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠರು ಯಾರಿಗೆ ಅವಕಾಶ ಕಲ್ಪಿಸಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin