ಸಂಪುಟ ಸೇರಲು ಸಿಎಂ ಮನೆಮುಂದೆ ಆಕಾಂಕ್ಷಿಗಳ ಕ್ಯೂ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.1- ಯಾವುದೇ ಕ್ಷಣದಲ್ಲೂ ಸಚಿವ ಸಂಪುಟ ರಚನೆಯಾಗಬಹುದೆಂಬ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ದಂಡು ಇಂದು ಕೂಡ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೆ ದಾಂಗುಡಿ ಇಟ್ಟಿತ್ತು.ಆರ್‍ಟಿನಗರದಲ್ಲಿರುವ ಸಿಎಂ ನಿವಾಸಕ್ಕೆ ಬೆಳಗಿನಿಂದಲೇ ಮಾಜಿ ಸಚಿವರು, ಶಾಸಕರು, ಆಕಾಂಕ್ಷಿಗಳು ಆಗಮಿಸಿ ತಮಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಬಿ.ಸಿ.ಪಾಟೀಲ್, ಶಾಸಕ ಮಹೇಶ್ ಕುಮಟಳ್ಳಿ ಸೇರಿದಂತೆ ಮತ್ತಿತರರು ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿದ್ದರು.ಇದೊಂದು ಸೌಹಾರ್ದಯುತವಾದ ಭೇಟಿ ಎಂದು ಪ್ರತಿಯೊಬ್ಬರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದರಾದರೂ ವಾಸ್ತವವಾಗಿ ತನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಿಜೆಪಿ ವರಿಷ್ಠರು ನಾಳೆ ಯಾವುದೇ ಕ್ಷಣದಲ್ಲಿ ದೆಹಲಿಗೆ ಆಗಮಿಸುವಂತೆ ಸಿಎಂಗೆ ಸಂದೇಶ ನೀಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸಚಿವ ಆಕಾಂಕ್ಷಿಗಳ ಲಾಬಿಯು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.ಹೀಗಾಗಿಯೇ ಒಂದು ಕಡೆ ಸಿಎಂ ಬಸವರಾಜ್ ಬೊಮ್ಮಾಯಿ, ಮತ್ತೊಂದು ಕಡೆ ಮಾಜಿ ಸಿಎಂ ಯಡಿಯೂರಪ್ಪನವರ ಮೇಲೂ ಆಕಾಂಕ್ಷಿಗಳು ಒತ್ತಡ ಹಾಕುತ್ತಿದ್ದಾರೆ.

ಉಳಿದಿರುವ ಒಂದು ಮುಕ್ಕಾಲು ವರ್ಷದ ಅವಯಲ್ಲಿ ತಮಗೂ ಸಂಪುಟದಲ್ಲಿ ಅವಕಾಶ ನೀಡಿದರೆ ಸರ್ಕಾರ ಮತ್ತು ಪಕ್ಷಕ್ಕೆ ಒಳ್ಳೆಯ ಹೆಸರು ಬರುವಂತೆ ಕೆಲಸ ಮಾಡುತ್ತೇವೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ಈಗಾಗಲೇ ಎರಡು ವರ್ಷಗಳ ಅವಯಲ್ಲಿ ಸಚಿವರಾಗಿರುವವರನ್ನು ಸಂಪುಟಕ್ಕೆ ತೆಗೆದುಕೊಳ್ಳದೆ ಹೊಸಬರು, ಪ್ರಾದೇಶಿಕ ಸಮತೋಲನತೆ, ಮುಂದಿನ 2023ರ ವಿಧಾನಸಭೆ, 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮಗೊಂದು ಸಚಿವ ಸ್ಥಾನ ಸೌಭಾಗ್ಯ ಕಲ್ಪಿಸುವಂತೆ ಆಕಾಂಕ್ಷಿಗಳು ಗಾಡ್‍ಫಾದರ್‍ಗಳ ಮೂಲಕವೂ ಒತ್ತಡ ಹಾಕುತ್ತಿದ್ದಾರೆ.

ಎಲ್ಲವೂ ದೆಹಲಿಯಲ್ಲೇ ಅಂತಿಮಗೊಳ್ಳುವುದರಿಂದ ಆಕಾಂಕ್ಷಿಗಳಿಗೆ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸಂಪುಟ ಸೇರ್ಪಡೆ ಕುರಿತಾಗಿ ಯಾವುದೇ ಸ್ಪಷ್ಟ ಭರವಸೆಯನ್ನು ಕೊಡುತ್ತಿಲ್ಲ.

ನಾನು ವರಿಷ್ಠರು ನೀಡುವ ಸೂಚನೆಯನ್ನು ಪಾಲನೆ ಮಾಡಬೇಕೆಂದು ಸಿಎಂ ಹೇಳಿದರೆ ಸಂಪುಟ ರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಅವರು ಯಾರನ್ನು ತೆಗೆದುಕೊಳ್ಳಬೇಕು, ಯಾರಿಗೆ ಯಾವ ಖಾತೆ ನೀಡಬೇಕೆಂಬುದನ್ನುಅವರೇ ತೀರ್ಮಾನಿಸುತ್ತಾರೆ.

ಸಂಪುಟ ರಚನೆಯಲ್ಲಿ ಅನಗತ್ಯವಾಗಿ ನನ್ನನ್ನು ಎಳೆದು ತರಬೇಡಿ ಎಂದು ಬಿಎಸ್‍ವೈ ತಮ್ಮ ಬೆಂಬಲಿಗರಿಗೂ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಗೂಟಾದ ಕಾರು ಏರಲು ಆಕಾಂಕ್ಷಿಗಳು ಒಂದು ಕಡೆ ಕಾವೇರಿ, ಒಂದು ಕಡೆ ಆರ್‍ಟಿನಗರ ಮತ್ತೊಂದು ಕಡೆ ಮಲ್ಲೇಶ್ವರಂ ಹಾಗೂ ಚಾಮರಾಜನಗರ(ಕೇಶವಕೃಪ) ಕಡೆಯಿಂದಲೂ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಕೊನೆ ಕ್ಷಣದವರೆಗೂ ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿರುವುದರಿಂದ ಆಕಾಂಕ್ಷಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

Facebook Comments

Sri Raghav

Admin