ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂಗೆ ಸಚಿವರ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಕನಿಷ್ಠ ಮಾನವೀಯತೆಯನ್ನು ತೋರಿಸದೆ ಹಣ ವಸೂಲಿಯನ್ನೆ ದಂಧೆ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವರು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದ್ದಾರೆ.

ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ನಡವಳಿಕೆಗಳು, ಹಣ ವಸೂಲಿ, ಸರ್ಕಾರದ ಜೊತೆ ಕೈ ಜೋಡಿಸದಿರುವುದು ಹಾಗೂ ಒಪ್ಪಂದದಂತೆ ನಡೆದುಕೊಳ್ಳದಿರುವುದಕ್ಕೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ಖಾಸಗಿ ಆಸ್ಪತ್ರೆಗಳು ಹಾಸಿಗೆಗಳನ್ನು ನೀಡಲೇಬೇಕು. ಯಾವ ಆಸ್ಪತ್ರೆಗಳು ನೀಡಲು ಹಿಂದೇಟು ಹಾಕುತ್ತವೋ ಅಂತಹ ಆಸ್ಪತ್ರೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸರ್ಕಾರವೇ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯವು ವ್ಯಕ್ತವಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಕೊರೊನಾ ನಮ್ಮ ನಿರೀಕ್ಷೆ ಮೀರಿ ಹಬ್ಬುತ್ತಿದೆ. ಕಳೆದ ಎರಡು ವಾರಗಳಿಂದ ಪ್ರತಿದಿನ ಒಂದು ಸಾವಿರ, ಒಂದೂವರೆ ಸಾವಿರ, ಎರಡೂವರೆ ಸಾವಿರ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ.  ಇಂತಹ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಮಾನವೀಯತೆಯನ್ನು ತೋರಬೇಕಿತ್ತು.

ಆದರೂ ಕೋವಿಡ್ ನೆಪದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದುಪ್ಪಟ್ಟು ದರದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ನಾವು ಆಸ್ಪತ್ರೆಗಳ ಮೇಲೆ ಏಕೆ ಕ್ರಮ ಜರುಗಿಸಬಾರದು ಎಂದು ಸಚಿವರು ಪ್ರಶ್ನಿಸಿದ್ದಾರೆಂದು ಗೊತ್ತಾಗಿದೆ.

ಪ್ರತಿಯೊಂದು ಆಸ್ಪತ್ರೆಗಳು ಸರ್ಕಾರದ ನಿಯಂತ್ರಣದಲ್ಲೇ ಇರುತ್ತದೆ. ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಕಾಯ್ದೆಯಡಿ ಆಸ್ಪತ್ರೆಗಳ ಮೇಲೆ ಕ್ರಮ ಜರುಗಿಸುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ. ಮುಲಾಜಿಲ್ಲದೆ ಅಂತಹ ಆಸ್ಪತ್ರೆಗಳನ್ನು ಕಪ್ಪು ಪಟ್ಟಿಗೆ ಇಲ್ಲವೇ ಪರಾವನಗಿ ರದ್ದು ಮಾಡಬೇಕೆಂಬ ಅಭಿಪ್ರಾಯವು ವ್ಯಕ್ತವಾಗಿದೆ.

ಸಚಿವರ ಮಾತನ್ನು ಸಹನೆಯಿಂದಲೇ ಆಲಿಸಿದ ಬಿಎಸ್‍ವೈ, ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ನಿನ್ನೆ ಖಾಸಗಿ ಆಸ್ಪತ್ರೆಗಳ ಮಾಲೀಕರ ಜೊತೆ ಸಭೆ ನಡೆಸಿದ್ದಾರೆ. 3000 ಹಾಸಿಗೆಗಳನ್ನು ಕೊಡಲು ಒಪ್ಪಿಕೊಂಡಿದ್ದಾರೆ. ಒಂದೆರಡು ದಿನ ಕಾದುನೋಡೋಣ. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುವುದು ನಮಗೂ ಗೊತ್ತು ಎಂದು ಸಚಿವರ ಆಕ್ರೋಶವನ್ನು ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ.

# ಆತುರದ ನಿರ್ಧಾರವಿಲ್ಲ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರೂ ಸದ್ಯದ ಸ್ಥಿತಿಯಲ್ಲಿ ಲಾಕ್‍ಡೌನ್ ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಚಿವರಿಗೆ ಯಡಿಯೂರಪ್ಪ ಕಡ್ಡಿ ಮುರಿದಂತೆ ಹೇಳಿದ್ದಾರೆ.  ಈಗಾಗಲೇ ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ.

ಸಾಧ್ಯವಾದರೆ ಶನಿವಾರವೂ ಲಾಕ್‍ಡೌನ್ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸೋಣ. ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸಮ್ಮತಿ ಸೂಚಿಸಿದ್ದಾರೆ. ಲಾಕ್‍ಡೌನ್ ಮಾಡುವುದರಿಂದ ಕೊರೊನಾ ತಡೆಯಲು ಸಾಧ್ಯವಿಲ್ಲ. ಈಗ ಯಾವ ಯಾವ ಪ್ರದೇಶ, ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕು ಇದೆಯೋ ಅಲ್ಲಲ್ಲಿ ಮಾತ್ರ ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡೋಣ ಎಂದು ಸಿಎಂ ಹೇಳಿದ್ದಾರೆ.

ಕೆಲವು ಸಚಿವರು ಲಾಕ್‍ಡೌನ್ ಮಾಡಲು ಸಿಎಂ ಮೇಲೆ ಒತ್ತಡ ಹಾಕಿದ್ದಾರೆ. ಬೆಂಗಳೂರಿನಲ್ಲಿ ಕಾಪೆರ್ರೇಟರ್‍ಗಳ ಕೂಡ ವೀಕೆಂಡ್ ಎಂಡ್ ಲಾಕ್‍ಡೌನ್‍ಗೆ ಸಲಹೆ ಮಾಡಿದ್ದಾರೆ. ಶನಿವಾರವೂ ಲಾಕ್‍ಡೌನ್ ಮಾಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸಭೆಯ ಗಮನಕ್ಕೆ ತಂದರು.

ಎಲ್ಲದಕ್ಕೂ ಲಾಕ್‍ಡೌನ್ ಮಾಡುವುದರಿಂದಲೇ ಪರಿಹಾರ ಸಿಗುವುದಿಲ್ಲ ಮೊದಲು ಇದರಿಂದ ಹೊರಬನ್ನಿ, ಸೋಂಕು ತಡೆಗಟ್ಟಲು ಇರುವ ಪರ್ಯಾಯ ಕ್ರಮಗಳ ಬಗ್ಗೆ ಸಲಹೆ ಕೊಡಿ. ನಾಳೆ ಬೆಂಗಳೂರಿನ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡೋಣ ಎಂದು ಯಡಿಯೂರಪ್ಪ ಸಲಹೆ ಕೊಟ್ಟರು.

Facebook Comments