ಸಂಪುಟ ಸಭೆಯಲ್ಲೂ ಡ್ರಗ್ ಕುರಿತು ಬಿಸಿಬಿಸಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.3- ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ ಮಾಫಿಯಾವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಿಸಿಬಿ ಪೊಲೀಸರಿಗೆ ಮುಕ್ತ ಸ್ವಾಂತ್ರತ್ಯ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಯಾರ ಮುಲಾಜಿಗೂ ಒಳಗಾಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.  ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾದಕ ವಸ್ತು ಜಾಲದಲ್ಲಿ ಕನ್ನಡ ಚಿತ್ರರಂಗದ ನಟನಟಿಯರು, ಕಲಾವಿದರು ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರ ಬಗ್ಗೆ ಚರ್ಚೆ ನಡೆಯಿತು.

ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಗೃಹ ಸಚಿವರಿಂದ ಮಾಹಿತಿ ಪಡೆದುಕೊಂಡರು. ಸಿಎಂ ಜೊತೆ ಸಚಿವರಾದ ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಡಾ.ಅಶ್ವಥ್ ನಾರಾಯಣ, ಡಾ.ಕೆ.ಸುಧಾಕರ್ ಸೇರಿದಂತೆ ಮತ್ತಿತರರು ದನಿಗೂಡಿಸಿ ಈ ಪ್ರಕರಣದಿಂದಾಗಿ ಗೃಹ ಇಲಾಖೆ ಮಾತ್ರವಲ್ಲದೆ ಕರ್ನಾಟಕ ರಾಜ್ಯಕ್ಕೂ ಕೆಟ್ಟ ಹೆಸರು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣ ಕುರಿತಂತೆ ಸಭೆಗೆ ಮಾಹಿತಿ ನೀಡಿದ ಗೃಹ ಸಚಿವ ಬೊಮ್ಮಾಯಿ ಅವರು, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಸಿಸಿಬಿ ಪೆÇಲೀಸರಿಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಮಹತ್ವದ ಸುಳಿವು ಸಿಕ್ಕಿದೆ ಎಂದು ವಿವರಿಸಿದರು.

ಟೆಕ್ನಾಲಜಿ ಮೂಲಕ ಎಲ್ಲೆಲ್ಲಿ ಪೂರೈಕೆಯಾಗುತ್ತದೆ ಎಂಬುದರ ಮೇಲೆಯೂ ತನಿಖೆ ನಡೆಯುತ್ತಿದೆ. ಸ್ವಯಂ ಹೇಳಿಕೆ ಕೊಟ್ಟವರು ಮಹತ್ವದ ಸುಳಿವು ಕೊಟ್ಟಿದ್ದಾರೆ. ಕೇವಲ ಸಿಸಿಬಿ ಮಾತ್ರವಲ್ಲ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಕ್ರೈಂ ಬ್ರಾಂಚ್ ಹೆಚ್ಚು ಜಾಗೃತವಾಗಿರುವಂತೆ ಸೂಚಿಸಿದ್ದೇವೆ ಎಂದು ಹೇಳಿದರು.

ಮೇಲ್ನೋಟಕ್ಕೆ ಇದರಲ್ಲಿ ಕನ್ನಡ ಚಿತ್ರರಂಗದ ಪ್ರಮುಖರು, ರಿಯಲ್ ಎಸ್ಟೇಟ್ ಮಾಫಿಯಾ ಸೇರಿದಂತೆ ಕೆಲವು ಸಮಾಜಘಾತುಕ ಶಕ್ತಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಶಾಮೀಲಾಗಿರುವುದು ಕಂಡುಬಂದಿರುವುದರಿಂದ ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ತನಿಖೆಯ ನೇತೃತ್ವ ವಹಿಸಿದ್ದಾರೆ ಎಂದು ಹೇಳಿದರು.

ಯಾವುದೇ ಒತ್ತಡ, ರಾಜಕೀಯ ಪ್ರಭಾವಗಳಿಗೆ ಮಣೆಯದೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಸುಮ್ಮನೆ ಬಿಡುವುದಿಲ್ಲ ಎಂದು ಬೊಮ್ಮಾಯಿ ಸಭೆಗೆ ಹೇಳಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ಚೆಕ್‍ಪೋಸ್ಟ್, ಕೊರಿಯರ್ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಮಾದಕ ವಸ್ತುಗಳು ರಾಜ್ಯಕ್ಕೆ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಅಧಿಕಾರಿಗಳೊಂದಿಗೆ ಪೊಲೀಸರು ಮಾಹಿತಿ ಹಂಚಿಕೊಳ್ಳಬೇಕು.

ಇದೇ ರೀತಿ ಗಡಿಭಾಗದ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ, ಚಾಮರಾಜನಗರ, ಕೋಲಾರ ಸೇರಿದಂತೆ ರಾಜ್ಯದ ಪ್ರಮುಖ ಚೆಕ್‍ಪೋಸ್ಟ್‍ಗಳಲ್ಲೂ ತಪಾಸಣೆಯನ್ನು ಬಿಗಿಗೊಳಿಸಲಾಗುವುದು. ಬಂದರು ಅಧಿಕಾರಿಗಳಿಗೂ ಮಾಹಿತಿ ನೀಡುವಂತೆ ಮನವಿ ಮಾಡಲಾಗುವುದು.

ಇನ್ನುಮುಂದೆ ಪ್ರತಿ ತಿಂಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳ ಮೇಲೂ ಕಣ್ಣಿಡಬೇಕು. ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರ ಕಾಲೇಜುಗಳ ಕಡೆ ಜಾಗೃತಿ ವಹಿಸಿ ಅಭಿಯಾನಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Facebook Comments