ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರು-ಶಾಸಕರು : ಸಂಪುಟ ಸಭೆಯಲ್ಲಿ ಸಿಎಂ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.22- ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಜತೆಗೆ ನಮ್ಮ ಶಾಸಕರೂ ಕೂಡ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು, ಈ ವೇಳೆ ಸದ್ಯದ ನೆರೆ ಹಾವಳಿ, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಬೇಕಾದ ವಿಷಯದಲ್ಲಿ ಕೆಲ ಸಚಿವರು ಅಸಡ್ಡೆ ತೋರಿದ್ದಾರೆ.

ಇನ್ನು ಅವರ ಕ್ಷೇತ್ರಗಳಲ್ಲೇ ಶಾಸಕರು ಕೂಡ ಎಡವಿದ್ದಾರೆ ಎಂದು ನೇರವಾಗಿಯೇ ಕಿಡಿಕಾರಿದ್ದಾರೆ. ಇತ್ತೀಚೆಗೆ ಕೆಲವರು ಸರ್ಕಾರದ ವಿರುದ್ಧ ನೇರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ವಿಪಕ್ಷಗಳಿಗೆ ಆಹಾರವಾಗುತ್ತಿದೆ. ಪಕ್ಷಕ್ಕೆ ಮುಜುಗರವಾಗುತ್ತಿದ್ದರೂ ಇದರ ಬಗ್ಗೆ ಚಕಾರವೆತ್ತದೆ ಕೆಲವರು ಸುಮ್ಮನಿದ್ದಾರೆ. ಇದು ಹೀಗೇ ಆದರೆ ಮುಂದೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಸವರಾಜ ಪಾಟೀಲ್ ಯತ್ನಾಳ್ ಅವರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಸಿಎಂ ಬೇಸರ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಸಚಿವ ಸಹೋದ್ಯೋಗಿಗಳನ್ನೇ ಪ್ರಶ್ನಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಉಪಚುನಾವಣೆ ಸಂದರ್ಭದಲ್ಲೇ ಇಂತಹ ಹೇಳಿಕೆಗಳು ಬರುತ್ತಿರುವುದು ಸರಿಯಲ್ಲ. ಜನರ ಬಳಿ ತೆರಳಿ ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಅಗತ್ಯತೆ ಇದೆ. ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾರೆ.

ಈಗಾಗಲೇ ಪಕ್ಷದಲ್ಲಿ ಇರಿಸು-ಮುರಿಸಾಗುವಂತಹ ಪರಿಸ್ಥಿತಿಯನ್ನು ನೋಡಿಯೂ ಸುಮ್ಮನಿದ್ದರೆ ಹೇಗೆ? ಉತ್ತಮ ಆಡಳಿತ ನೀಡಲು ನೀವೆಲ್ಲರೂ ಕೈಜೋಡಿಸಬೇಕಲ್ಲವೆ ಎಂದು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಕೆಲ ಹಿರಿಯ ಸಚಿವರು ಸಿಎಂಗೆ ಸಮಾಧಾನ ಹೇಳಿದ್ದು, ತಮ್ಮೊಂದಿಗೆ ಎಲ್ಲರೂ ಇದ್ದು ಒಟ್ಟಾಗಿ ಉಪಚುನಾವಣೆ ಎದುರಿಸೋಣ. ಸರ್ಕಾರಕ್ಕೆ ಯಾವುದೇ ಮುಜುಗರವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

Facebook Comments