ಮುಂದೇನಾಗುತ್ತದೋ ಎಂಬ ಭೀತಿ, ಹಲವು ಸಚಿವರಿಗೆ ತಳಮಳ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.22- ರಾಜ್ಯ ಬಿಜೆಪಿ ಯಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುತ್ತಿರುವ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಇಂದು ಸಭೆ ಸೇರ ಲಿದ್ದು ಹಲವು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಿದೆ. ತೆರೆಮರೆಯಲ್ಲಿ ಈಗ ಹಲವು ಚಟುವಟಿಕೆಗಳು ವೇಗವಾಗಿ ನಡೆಯು ತ್ತಿದ್ದು ಸಚಿವ ಸಂಪುಟ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.

ಮುಖ್ಯಮಂತ್ರಿಗಳು ಹಲವು ಕ್ರಮಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಿದ್ದು ಅದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಇಂದಿನ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡು ವಿಚಾರಗಳನ್ನು ಪ್ರಸ್ತಾಪಿಸುವ ಸಾಧ್ಯತೆ ಯಿದೆ ಎನ್ನಲಾಗುತ್ತಿದೆ.

ಮೊದಲನೆಯದಾಗಿ ಜ.26ಕ್ಕೆ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಲಿದೆ. ಈ ಎರಡು ವರ್ಷಗಳಲ್ಲಿ ಸಹಕಾರ ಕೊಟ್ಟಿರುವ ಎಲ್ಲ ಸಚಿವರಿಗೆ ಯಡಿಯೂರಪ್ಪ ಧನ್ಯವಾದ ಹೇಳಲಿದ್ದಾರೆ ಎನ್ನಲಾಗಿದೆ. ಬಳಿಕ ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳ ಕುರಿತು ಸ್ವತಃ ಯಡಿಯೂರಪ್ಪ ಅವರೇ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಅದರೊಂದಿಗೆ ಹಲವು ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗು ತ್ತಿದೆ. ಪ್ರಮುಖವಾಗಿ ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ಇತರೆ ಇಲಾಖೆಯ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ಮಹತ್ವದ ತೀರ್ಮಾನ ಚರ್ಚೆಗೆ ಬರುವ ಸಾಧ್ಯತೆ ಇದೆ.

ಅದರೊಂದಿಗೆ ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆಯಡಿ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸುವುದು, ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ವಸತಿ ಇಲಾಖೆ ಮೂಲಕ 6 ಲಕ್ಷ ಮನೆ ನಿರ್ಮಾಣ ಮಾಡುವ ಕುರಿತು ಸಂಪುಟದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ರಾಜ್ಯ ನಾಗರಿಕ ಸೇವಾ ನಿಯಮಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇವಾ ನಿಯಮಗಳ ವಿಧೇಯಕ ತಿದ್ದುಪಡಿ ಮಾಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರ ಅಳವಡಿಕೆ ಮಾಡಲು ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಕುರಿತು ಚರ್ಚಿಸುವ ಸಾಧ್ಯತೆ ಇದೆ.

Facebook Comments