ಜಯಂತಿಗಳಿಗೆ ಬ್ರೇಕ್, ಸರ್ಕಾರಿ ನೌಕರರಿಗೆ ರಜೆಮಜಾ : ಇಲ್ಲಿದೆ ಸಂಪುಟ ಸಭೆಯ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Cabinet--01

ಬೆಂಗಳೂರು, ಡಿ.5-ಭೂ ಪರಿವರ್ತನಾ ನಿಯಮಗಳ ಸರಳೀಕರಣ, ಆರ್‍ಟಿಇ ಕಾಯ್ದೆ ತಿದ್ದುಪಡಿ, ಆರನೇ ವೇತನ ಆಯೋಗದ ಕೆಲವು ಶಿಫಾರಸುಗಳ ಅಂಗೀಕಾರ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸುವ ಚಿತ್ರಗಳಿಗೆ ಸಹಾಯಧನ ನೀಡುವ ಮಹತ್ವದ ನಿರ್ಧಾರಗಳಿಗೆ ಸಚಿವ ಸಂಪುಟ ಸಭೆ ಇಂದು ಅನುಮತಿ ನೀಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಂದು ಮಹತ್ವದ ವಿಷಯಗಳು ಚರ್ಚೆಯಾಗಿದ್ದು, ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಈ ಮಾಹಿತಿ ನೀಡಿದರು.

ಅದರಲ್ಲಿ ಪ್ರಮುಖವಾಗಿ ಸರ್ಕಾರಿ ಶಾಲೆಗಳಿರುವ ಕಡೆ ಆರ್‍ಟಿಇ ಯಡಿ, ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ನಿಯಮಾವಳಿಗಳು ಸ್ಪಷ್ಟವಾಗಿದ್ದು, ನಿರ್ದಿಷ್ಟ ದೂರದವರೆಗೂ ಸರ್ಕಾರಿ ಶಾಲೆಗಳು ಇಲ್ಲದೆ ಇದ್ದಾಗ ಆರ್‍ಟಿಇ ಮೂಲಕ ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸಿ ಸರ್ಕಾರ ಶುಲ್ಕ ಪಾವತಿಸಲು ಅವಕಾಶ ಇದೆ. ಆದರೆ ಸರ್ಕಾರ ಹಿಂದೆ ನಿಯಮವನ್ನು ಸರಿಯಾಗಿ ಪಾಲನೆ ಮಾಡದೆ ಸರ್ಕಾರಿ ಶಾಲೆಗಳಿದ್ದರೂ ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಹಾಗಾಗಿ ನಿಯಮದ ಮಾರ್ಪಾಡು ಜಾರಿಗೆ ತರಲು ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಮುಂದೆ ಸರ್ಕಾರಿ ಶಾಲೆಗಳಿಲ್ಲದ ಕಡೆಗೆ ಮಾತ್ರ ಖಾಸಗಿ ಶಾಲೆಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಆರನೇ ವೇತನ ಆಯೋಗದ ಕೆಲವು ಭತ್ಯೆಗಳ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಸಂಪುಟ ಸಭೆ ಅನುಮತಿ ನೀಡಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ 400 ಕೋಟಿಯಷ್ಟು ಹೊರೆಯಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದ್ದರಿಂದ 10,800 ಕೋಟಿ ರೂ. ಆರ್ಥಿಕ ಹೊರೆ ರಾಜ್ಯ ಬೊಕ್ಕಸಕ್ಕೆ ಆಗಿತ್ತು. ಆ ವೇಳೆ ಕೇವಲ ಮೂಲ ವೇತನವನ್ನು ಹೆಚ್ಚಳ ಮಾಡಲಾಗಿತ್ತು. ಭತ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ವೇತನ ಆಯೋಗದ ಅಂತಿಮ ವರದಿಯಲ್ಲಿ ಶಿಫಾರಸು ಮಾಡಿದಂತೆ ಕೆಲವು ಭತ್ಯೆಗಳನ್ನು ಪರಿಷ್ಕರಣೆ ಮಾಡಲಾಗಿದೆ. ಪಿಂಚಣಿಯ ನಿಯಮಗಳನ್ನು ಸಡಿಲ ಮಾಡಲಾಗಿದೆ ಎಂದು ಹೇಳಿದರು.

ಪ್ರಮುಖವಾಗಿ ವಿವಿಧ ಗಣ್ಯರ ಜಯಂತಿಗೆ ರಜೆ ಕೊಡುವ ಬದಲು ಸರ್ಕಾರಿ ಕಚೇರಿಗಳನ್ನು ನಡೆಸಿ ಪ್ರತಿ ತಿಂಗಳು ನಾಲ್ಕನೇ ಶನಿವಾರ ರಜೆ ನೀಡುವ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರಲು ಚರ್ಚೆ ನಡೆದಿದೆ. ಆರನೇ ವೇತನ ಆಯೋಗದ ಕೆಲವು ಶಿಫಾರಸುಗಳ ಅಧ್ಯಯನಕ್ಕಾಗಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಆ ಸಮಿತಿ ಸರ್ಕಾರಿ ಜಯಂತಿಗಳ ರಜೆ ಮತ್ತು ನಾಲ್ಕನೇ ಶನಿವಾರದ ರಜೆಯ ಬಗ್ಗೆಯೂ ತೀರ್ಮಾನ ಕೈಗೊಳ್ಳಲಿದೆ. ಆನಂತರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಪೊಲೀಸರ ವೇತನ ಹೆಚ್ಚಳ ಸಂಬಂಧ ಹಿರಿಯ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸಮಿತಿ ನೀಡಿರುವ ಶಿಫಾರಸು ಆರನೇ ವೇತನ ಆಯೋಗದಲ್ಲಿ ಅಡಕವಾಗಿಲ್ಲ. ಪೊಲೀಸರ ವೇತನ ಪರಿಷ್ಕರಣೆ ಪ್ರತ್ಯೇಕವಾಗಿ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಭೂಪರಿವರ್ತನೆ ನಿಯಮಾವಳಿಗಳನ್ನು ಸಡಿಲೀಕರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅರ್ಜಿದಾರರ ಏಕಗವಾಕ್ಷಿ ಯೋಜನೆಯಡಿ ಕಂದಾಯ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕು. ಕಂದಾಯ ಇಲಾಖೆ ಇತರ ಇಲಾಖೆಗಳಿಗೆ ಪತ್ರ ಬರೆದು,ಆಕ್ಷೇಪಣೆಗಳನ್ನು ಪಡೆದುಕೊಂಡು ಸಮನ್ವಯತೆ ಸಾಧಿಸಿ ಬೇರೆ ಬೇರೆ ಇಲಾಖೆಗಳಿಂದ ಒಂದು ತಿಂಗಳೊಳಗಾಗಿ ಭೂಪರಿವರ್ತನೆಗೆ ಅನುಮತಿ ನೀಡಬೇಕು ಅಥವಾ ತಿರಸ್ಕರಿಸಬೇಕು. ಕಂದಾಯ ಇಲಾಖೆ ಬೇರೆ ಇಲಾಖೆಗಳಿಗೆ ಪತ್ರ ಬರೆಯುವುದನ್ನು ವಿಳಂಬ ಮಾಡುವಂತಿಲ್ಲ. ಅದಕ್ಕೂ ಸ್ಪಷ್ಟ ನಿಯಮಾವಳಿ ರೂಪಿಸಲಾಗಿದೆ ಎಂದು ಹೇಳಿದರು.

ನಾಲ್ಕು ವರ್ಷದ ಹಿಂದೆ ಭೂಪರಿವರ್ತನಾ ನಿಯಮಾವಳಿಗಳನ್ನು ಸರಳೀಕರಣ ಮಾಡಲಾಗಿತ್ತು. ಅದರಿಂದ ಅರ್ಜಿ ವಿಲೇವಾರಿಯ ಕಾಲಮಿತಿ ಒಂದು ವರ್ಷಕ್ಕೆ ಸೀಮಿತಗೊಂಡಿದೆ. 1964 ಭೂ ಕಂದಾಯ ಕಾಯ್ದೆ ಕಲಂ 2ಕ್ಕೆ ಇನ್ನಷ್ಟು ತಿದ್ದುಪಡಿ ಮಾಡಿ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳೀಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿ ಭೂ ಹಂಚಿಕೆ ಮಾಡಲು ಸವಾಲಿನ ಕೆಲಸ ವಾಗುತ್ತಿರುವುದರಿಂದ ಕೈಗಾರಿಕೋದ್ಯಮಿಗಳೇ ನೇರ ಭೂಮಿ ಖರೀದಿ ಮಾಡಬೇಕು, ಅದರ ಪರಿವರ್ತನೆಯ ನಿಯಮಾವಳಿಗಳನ್ನು ಸಡಿಲೀಕರಣಗೊಳಿಸಬೇಕೆಂಬ ಉದ್ದೇಶದಿಂದ ಹೊಸ ತಿದ್ದುಪಡಿ ತರುತ್ತಿರುವುದಾಗಿ ಹೇಳಿದರು.

ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಒಟ್ಟು 3.17 ಲಕ್ಷ ಹೆಣ್ಣು ಮಕ್ಕಳ ಬೋಧನಾ ಶುಲ್ಕವನ್ನು ಭರಿಸಲು ಸಂಪುಟ ಸಭೆ ತೀರ್ಮಾನಿಸಿದೆ. ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣವೆಂದು ಸಿದ್ದರಾಮಯ್ಯ ಸರ್ಕಾರ ಘೋಷಣೆ ಮಾಡಿತ್ತು. ಅದರ ಅನುಸಾರ ವಾರ್ಷಿಕ 95 ಕೋಟಿ ರೂ.ಗಳ ಬೋಧನಾ ಶುಲ್ಕ ಭರಿಸಲು ಸರ್ಕಾರ ನಿರ್ಧರಿಸಿದೆ. 1.75 ಲಕ್ಷ ಪದವಿ, 1.33 ಲಕ್ಷ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರು ಈ ಸೌಲಭ್ಯ ಪಡೆಯುತ್ತಾರೆ ಎಂದು ಹೇಳಿದರು.
ಕಬ್ಬು ಕಟಾವಿಗೆ ಬಂದಿದ್ದರೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವುದನ್ನು ಆರಂಭಿಸಿಲ್ಲ. ರೈತರ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರ ಕಬ್ಬು ಅರೆಯುವುದನ್ನು ಆರಂಭಿಸಲು ಕಾರ್ಖಾನೆಗೆ 20 ಕೋಟಿ ರೂ.ಗಳ ಆರಂಭಿಕ ಬಂಡವಾಳ ನೀಡುತ್ತಿದೆ. ಇದನ್ನು ಯಾವುದೇ ಸಾಲ ಕ್ಕೆ ಜಮಾ ಮಾಡುವಂತಿಲ್ಲ. ಆಡಳಿತ ಮಂಡಳಿ ಅವ್ಯವಹಾರದಿಂದ ಉಂಟಾಗಿರುವ 192 ಕೋಟಿ ರೂ. ನಷ್ಟಕ್ಕೂ ಇದನ್ನು ಬಳಸುವಂತಿಲ್ಲ. ಆಡಳಿತ ಮಂಡಳಿ ಅವ್ಯವಹಾರಗಳೇ ಬೇರೆ. ಈಗ ಸರ್ಕಾರ ಹಣ ನೀಡುತ್ತಿರುವುದು ಕಬ್ಬು ಅರೆಯುವ ಸಲುವಾಗಿ ಮಾತ್ರ ಎಂದು ಹೇಳಿದರು.

ಘಟಪ್ರಭಾ ಎಡದಂಡೆ ನಾಲೆ ಆಧುನೀಕರಣಕ್ಕೆ 583 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಜಲಸಂಪನ್ಮೂಲ ಇಲಾಖೆ ಸಲ್ಲಿಸಿತ್ತು. ಅದಕ್ಕೆ ಒಪ್ಪಿಗೆ ನೀಡಲಾಗಿದೆ. ಮಂಡ್ಯದ  ಕೆ.ಆರ್.ಪೇಟೆ ತಾಲೂಕಿನ ಆಡಿಯಾ ಸೇರಿದಂತೆ 12 ಗ್ರಾಮಗಳಿಗೆ ಕಾವೇರಿಯಿಂದ ನೀರು ಹರಿಸುವ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.
ಬಾಗಲಕೋಟೆ ಜಿಲ್ಲೆ ಮುದೋಳ ತಾಲೂಕು ಎಡಹಳ್ಳಿಯಲ್ಲಿ ಮುಂದಿನ ವರ್ಷದಿಂದಲೇ ಪದವಿ ಕಾಲೇಜು ಸ್ಥಾಪನೆಗೆ ಸಮ್ಮತಿಸಲಾಗಿದೆ. ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ 4 ವರ್ಷಕ್ಕೆ 450 ಕೋಟಿ ರೂ. ಖರ್ಚಾಗಲಿದ್ದು, ಈ ವರ್ಷ 90 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್‍ಶೋ ನಡೆಯಲಿದೆ. ಇದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚಾರ ದಟ್ಟಣೆ ತೀವ್ರಗೊಳ್ಳಲಿದೆ. ಸಂಚಾರ ದಟ್ಟಣೆಯನ್ನು ಮಾರ್ಗ ಬದಲಾವಣೆ ಮಾಡಲು ಅನುಕೂಲವಾಗುವಂತೆ ಏರ್‍ಶೋ ನಡೆಯುವ ಸುತ್ತಮುತ್ತಲ ಭಾಗಗಳ ರಸ್ತೆಗಳ ಅಭಿವೃದ್ಧಿಗೆ 30 ಕೋಟಿ ರೂ. ಹಣ ನೀಡಲು ಒಪ್ಪಿಗೆ ಸೂಚಿಸಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನ್ಯಾಯ ಬೆಲೆ ಅಂಗಡಿಗಳಿಗೆ ಪ್ರತಿ ಕ್ವಿಂಟಾಲ್ ಅಕ್ಕಿ ಮಾರಿದರೆ ಈವರೆಗೂ ನೀಡಲಾಗುತ್ತಿದ್ದ 87 ರೂ. ಕಮೀಷನ್‍ನನ್ನು ಈಗ 100 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಮೊದಲು ಸೋರಿಕೆಯಿಂದಾಗಿ ಅವರಿಗೆ ಲಾಭವಾಗುತ್ತಿತ್ತು. ಆಧುನಿಕ ತಂತ್ರಜ್ಞಾನ ಅಳವಡಿಸಿರುವುದರಿಂದ ಸೋರಿಕೆಗೆ ಕಡಿವಾಣ ಹಾಕಲಾಗಿದೆ. ನಷ್ಟವಾಗಬಾರದು ಎಂಬ ಕಾರಣಕ್ಕಾಗಿ ಅವರಿಗೆ ನ್ಯಾಯಯುತ ಕಮಿಷನ್ ನೀಡಲು ಸರ್ಕಾರ ಒಪ್ಪಿದೆ ಎಂದರು.

ರಾಜ್ಯದ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಲನಚಿತ್ರ ಚಿತ್ರೀಕರಣ ಮಾಡಿ ಅವುಗಳಲ್ಲಿ ಹೆಚ್ಚು ಪ್ರಚಾರ ನೀಡುವ ಚಿತ್ರಗಳಿಗೆ ಒಂದರಿಂದ ಎರಡು ಕೋಟಿ ರೂ. ಸಹಾಯಧನ ನೀಡಲು ಪ್ರವಾಸೋದ್ಯಮ ಇಲಾಖೆ ಒಪ್ಪಿದೆ. ಕೆಲವು ಚಿತ್ರಗಳಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ಆಕರ್ಷಣೀಯವಾಗಿ ತೋರಿಸುವುದರಿಂದ ಜನ ಹೆಚ್ಚಾಗಿ ಆ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಇದರಿಂದ ಆದಾಯ ಹೆಚ್ಚಾಗುತ್ತದೆ. ಸಿನಿಮಾ ಕೂಡ ಒಂದು ಜಾಹೀರಾತು ಮಾಧ್ಯಮವಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿಯೇ ಚಿತ್ರೀಕರಣ ಮಾಡಲು ಬರುವವರಿಗೆ ಅವಕಾಶವಾಗದಂತೆ ಬಿಗಿಯಾದ ನಿಯಮಾವಳೀಗಳನ್ನು ರೂಪಿಸಲಾಗಿದೆ. 100 ಅಂಕಗಳ ಮಾನದಂಡಗಳನ್ನು ರೂಪಿಸಲಾಗಿದ್ದು, ಅದನ್ನು ಆಧರಿಸಿ ಸಹಾಯಧನ ಬಿಡುಗಡೆ ಮಾಡಲಾಗುವುದು. ಸಿನಿಮಾದ ಬಜೆಟ್ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಎಷ್ಟರ ಮಟ್ಟಿಗೆ ವೈಭವೀಕರಿಸಲಾಗಿದೆ ಎಂಬುದನ್ನು ಆಧರಿಸಿ ಸಹಾಯ ಧನ ನೀಡಲಾಗುತ್ತದೆ ಎಂದು ಹೇಳಿದರು.

(# ಈಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು#)

Facebook Comments

Sri Raghav

Admin