ಇಂದು ನಡೆದ ಸಚಿವ ಸಂಪುಟ ಸಭೆಯ ಹೈಲೈಟ್ಸ್ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27 : 1998ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಗೊಂಡ ಕೆಎಎಸ್ ಅಧಿಕಾರಿಗಳ ಪರಿಷ್ಕøತ ಆಯ್ಕೆ ಪಟ್ಟಿಯಿಂದ ಹಲವು ಅಧಿಕಾರಿಗಳಿಗೆ ಸೇವಾಭದ್ರತೆ ಸಿಗದೇ ಇರುವ ಕಾರಣದಿಂದ ಅವರಿಗೆ ಸೇವಾಭದ್ರತೆ ಒದಗಿಸಲು ಸರ್ಕಾರ “Karnataka Civil Services (Protection of Service of Persons appionted in pursuance to final selection list Pulished by Selection authority) Ordinance 2019” ಅನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಕೃಷ್ಣಬೈರೇಗೌಡ ಹೇಳಿದ್ದಾರೆ.

ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಉಚ್ಚನ್ಯಾಯಾಲಯದ ಆದೇಶದನ್ವಯ ನಡೆದುಕೊಂಡರೆ 28 ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಬೇಕಾಗುತ್ತದೆ ಅಲ್ಲದೆ, 115 ಅಧಿಕಾರಿಗಳನ್ನು ಸೇವಾ ಬದಲಾವಣೆಗೆ ಒಳಗಾಗಬೇಕಾಗುತ್ತದೆ ಇವರಿಗೆ ಸೇವಾಭದ್ರತೆ ಒದಗಿಸಲು ಈ ವಿಧೇಯಕವನ್ನು ತರಲು ಉದ್ದೇಶಿಸಿದೆ ಎಂದು ಅವರು ತಿಳಿಸಿದರು.

ಸಚಿವ ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು:
# ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 358 ಗ್ರಾಮ ಪಂಚಾಯತ್ ಕಾರ್ಯದರ್ಶಿ, ಗ್ರೇಡ್ – II ಹುದ್ದೆಗಳನ್ನು ತುಂಬಲು ಹಾಗೂ 95 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ತುಂಬಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

# ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬರದಛಾಯೆ ಇರುವ ಪ್ರದೇಶಗಳಲ್ಲಿ 2019 ಮತ್ತು 2020 ರಲ್ಲಿ ಮೋಡಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲು 2 ವಿಮಾನ ಹಾಗೂ 3 ರೇಡಾರ್‍ಗಳನ್ನು ಬಳಸಲು 93 ಕೋಟಿ. ರೂಗಳನ್ನು ವೆಚ್ಚ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

# ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 1000 ಹಾಸಿಗೆ ಸಾಮಥ್ರ್ಯದ ಹೆಚ್ಚುವರಿ ವಾರ್ಡ್ ನಿರ್ಮಾಣಕ್ಕಾಗಿ 59 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

# ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಕೆರೆಗೆ ಹೇಮಾವತಿಯಿಂದ 140 ಎಂ.ಸಿ.ಎಫ್.ಟಿ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ಏತ ನೀರಾವರಿ ನಾಲೆ ನಿರ್ಮಾಣ ಕಾಮಗಾರಿಗೆ 54 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

# ಒಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುರೇಕುಪ್ಪ ಮೆ|| ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆಗೆ 2000.58 ಎಕರೆ ಹಾಗೂ ಯರಬನಹಳ್ಳಿ ಗ್ರಾಮದ 1666.73 ಎಕರೆಯ ಭೂಮಿಯನ್ನು ಲೀಸ್‍ನಿಂದ ಬದಲಾಯಿಸಿ ಕ್ರಯಪತ್ರ ಮಾಡಿಕೊಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹಿಂದೆ ಈ ಭೂಮಿಯನ್ನು 10 ವರ್ಷಗಳ ಲೀಸ್‍ಗೆ ನೀಡಲಾಗಿತ್ತು.

# ವಿಜಯಪುರ ನಗರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ವಿ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಗುತ್ತಿಗೆ ನೀಡಿರುವ 12584 ಚದರ ಯಾರ್ಡ್ ಜಮೀನನ್ನು ಸದರಿ ಸಂಸ್ಥೆಗೆ ಖಾಯಂ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

# ರಾಮನಗರ ಜಿಲ್ಲೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ 61.24 ಕೋಟಿ ರೂ.ಗಳನ್ನು ಮಂಜೂರು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

# ರಾಯಚೂರು ವಿಶ್ವವಿದ್ಯಾನಿಲಯದ ಸ್ಥಾಪನೆಗಾಗಿ 6.99 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ.   ಕಾರ್ಕಳ ಪಟ್ಟಣದ ಹಾಲಿ ಒಳಚರಂಡಿ ಅಭಿವೃದ್ಧಿ ಯೋಜನೆಗಾಗಿ 13 ಕೋಟಿ ರೂ.ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

# ಜವಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಮೀಷನ್ ಯೋಜನೆಯಡಿ ಮೈಸೂರು ನಗರಕ್ಕೆ 24 X7 ನೀರು ಸರಬರಾಜು ಮಾಡುವ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ ಪಾಲು 85.60 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದಲೇ ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

# ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು 22.89 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

# ಕೃಷ್ಣರಾಜಸಾಗರ ಅಣೆಕಟ್ಟೆಯ ಎಡಭಾಗದ ವಿಶ್ವೇಶ್ವರಯ್ಯ ನಾಲೆಯ ಮುಖ್ಯ ನಾಲೆ ಮತ್ತು ಶಾಖಾ ನಾಲೆಗಳನ್ನು ಶಿಥಿಲವಾಗಿರುವುದರಿಂದ ಇವುಗಳ ಅಭಿವೃದ್ಧಿ ಕಾಮಗಾರಿಗಾಗಿ 522.37 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

# ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ತೇರಗಾಂವ, ಕಾವಲವಾಡ ಮತ್ತು 91 ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲು 119 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

# ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಮತ್ತು 23 ಗ್ರಾಮಗಳ ಹಾಗೂ ಕೋಡಿಹಳ್ಳಿ ಹಾಗೂ ಇತರೆ 13 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು 17.94 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

# ಹಾಸನದಲ್ಲಿ ನೋ ಫ್ರಿಲ್ ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮೆ|| ರೈಟ್ಸ್ ಸಂಸ್ಥೆಗೆ ತಾಂತ್ರಿಕ ಸಹಾಯ ಮತ್ತು ಮೂರನೇ ವ್ಯಕ್ತಿ ಪರಿವೀಕ್ಷಣಾ ಸೇವೆ ಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

# ಮೈಸೂರಿನಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಖೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿಯಾಗಿ ಉಂಟಾಗಿರುವ ಮಾರ್ಪಾಡು ಕಾಮಗಾರಿಗಳಿಗೆ ಸೇರಿದಂತೆ 168.59 ಕೋಟಿ ರೂ.ಗಳ ಪರಿಷ್ಕøತ ಮೊತ್ತಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

# ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನೋಟಾ (NOTA) ಅಳವಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತು.   ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಸತಿ ಶಿಕ್ಷಣ ಸಂಸ್ಥೆಗಳ 15 ಪರಿಶಿಷ್ಟ ಜಾತಿ ಮತ್ತು ಪಂಗಡದ ವಿವಿಧ ವಸತಿ ಶಾಲೆಗಳ ಕಟ್ಟಡದ ನಿರ್ಮಾಣಕ್ಕೆ 377.15 ಕೋಟಿ ರೂ.ಗಳಿಗೆ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

# ಮದ್ದೂರು ಪಟ್ಟಣಕ್ಕೆ 2ನೇ ಹಂತದ ಒಳಚರಂಡಿ ಕಲ್ಪಿಸಲು 50.15 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

• ಹೇಮಾವತಿ ನದಿ ಮೂಲದಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿಗೆ ಸಮಗ್ರ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ 62.45 ಕೋಟಿ ರೂ.ಗಳ ಕಾಮಗಾರಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

 

Facebook Comments

Sri Raghav

Admin