ಸಿಎಂ ಸೆಲೆಕ್ಷನ್ ಆಟ ಮುಗಿದ ಬೆನ್ನಲ್ಲೇ ಸಚಿವ ಸ್ಥಾನಕ್ಕಾಗಿ ಸರ್ಕಸ್ ಶುರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿರ್ಗಮನದೊಂದಿಗೆ ಹಲವು ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ದೆಹಲಿ ನಾಯಕರ ಜತೆ ಸಂಪರ್ಕ ಹೊಂದಿರುವ ಹಲವು ಬಿಜೆಪಿ ಮುಖಂಡರು ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಕಸರತ್ತು ನಡೆಸಿದ್ದಾರೆ. ಇದರ ಜತೆಗೆ ಯಡಿಯೂರಪ್ಪ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದ ಕೆಲ ಹಿರಿಯ ನಾಯಕರಿಗೆ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲಿದೆಯೇ, ಇಲ್ಲವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಮುಖ್ಯಮಂತ್ರಿ ಹುದ್ದೆ ಯಿಂದ ಯಡಿಯೂರಪ್ಪ ಕೆಳಗಿಳಿದ ನಂತರ, ಕೆಲವು ಹಿರಿಯ ನಾಯಕರು, ಬಿಎಸ್‍ವೈ ನಿಷ್ಠಾವಂತರು ಸೇರಿದಂತೆ ಹಲವು ನಾಯಕರಿಗೆ ಕೊಕ್ ನೀಡುವ ಸಾಧ್ಯತೆಯಿದೆ. ಇದರೊಂದಿಗೆ ಬೊಮ್ಮಾಯಿ ಅವರ ಹೊಸ ಸಂಪುಟದಲ್ಲಿ ಯಡಿಯೂರಪ್ಪ ನಿಷ್ಠರನ್ನು ಹೊರಗಿಡುವ ಸಂಭವವಿದೆ. ಕೇಂದ್ರ ಬಿಜೆಪಿ ನಾಯಕರು ಸಂಪುಟವನ್ನು ಪುನಾರಚಿಸುವ ಸಂಭವವಿದೆ.

ಈ ಹಿಂದೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಜಗದೀಶ್ ಶೆಟ್ಟರ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಬೊಮ್ಮಾಯಿ ಆಡಳಿತದಲ್ಲಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ. ಹಿರಿಯರಾಗಿದ್ದರೂ ಶೆಟ್ಟರ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಲು ಸಮ್ಮತಿಸಿದ್ದರು. ಇವರ ಜತೆಗೆ ಬಿಜೆಪಿ ಹಿರಿಯ ನಾಯಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆಯಿದೆ. ಆದರೆ, ಇದೆಲ್ಲ ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ.

ಸರ್ಕಾರವನ್ನು ರಚಿಸಲು ಸಹಾಯ ಮಾಡಿದ್ದಕ್ಕಾಗಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಸೇರಿದ್ದ ಕೆಲವರಿಗೆ ಸ್ಥಾನ ಸಿಗಬಹುದೆಂದು ರಾಜ್ಯ ಬಿಜೆಪಿ ಘಟಕದ ಅನೇಕ ನಾಯಕರು ನಂಬಿದ್ದಾರೆ. ಆದರೆ, ಅದೇ ಖಾತೆಗಳನ್ನು ಉಳಿಸಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುತ್ತದೆಯೇ ಎಂಬುದೂ ಖಚಿತವಾಗಿಲ್ಲ. ಜೆಡಿಎಸ್-ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರಿದ್ದ ಹಲವು ಶಾಸಕರಿಗೆ ಪ್ರಮುಖ ಖಾತೆ ನೀಡಲಾಗಿತ್ತು. ಆದರೆ, ಬೊಮ್ಮಾಯಿ ಯಡಿಯೂರಪ್ಪ ಅವರ ಆಪ್ತರಾಗಿರುವ ಕಾರಣ ವಲಸೆ ಶಾಸಕರ ಸ್ಥಾನವನ್ನು ವಾಪಸ್ ಪಡೆಯುವ ಸಾಧ್ಯತೆಯಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಶಿವಮೊಗ್ಗ ಜಿಲ್ಲಾಯ ತೀರ್ಥಹಳ್ಳಿಯಿಂದ ನಾಲ್ಕು ಬಾರಿ ಶಾಸಕರಾಗಿರುವ ಅರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಅರಗ ಜ್ಞಾನೇಂದ್ರ ಹಿರಿಯ ಒಕ್ಕಲಿಗ ನಾಯಕರಾಗಿದ್ದಾರೆ. ಆದರೆ, ಒಕ್ಕಲಿಗ ಸಮುದಾಯದ ಬೇರೆ ಶಾಸಕರಿಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ದೊರೆತಿರಲಿಲ್ಲ. ಹೀಗಾಗಿ ಸದ್ಯ ಅರಗ ಜ್ಞಾನೇಂದ್ರ ಸಚಿವ ಸಂಪುಟದ ಆಕಾಂಕ್ಷಿಯಾಗಿದ್ದಾರೆ.

ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಇಬ್ಬರೂ ಈಡಿಗ ಸಮುದಾಯದವರಾಗಿದ್ದಾರೆ. ಇಬ್ಬರು ಬಿಜೆಪಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಶಿವಮೊಗ್ಗ ಜಿಲ್ಲಾಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿಸಲು ನೆರವಾಗಿದ್ದಾರೆ. ಎಸ್.ಎಂ.ಕೃಷ್ಣ ಮತ್ತು ಯಡಿಯೂರಪ್ಪ ಸಂಪುಟದಲ್ಲಿ ಕೆಲಸ ಮಾಡಿ ಇಬ್ಬರಿಗೂ ಅನುಭವವಿದೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕುಮಾರ್ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿದ್ದರು ಮತ್ತು ಹರತಾಳು ಹಾಲಪ್ಪ ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾಗಿದ್ದರು.
ಈ ಸಮುದಾಯಕ್ಕೆ ಯಡಿಯೂರಪ್ಪ ಅವರ ಕ್ಯಾಬಿನೆಟ್‍ನಲ್ಲಿ ಸ್ಥಾನ ಸಿಗದ ಕಾರಣ ಅವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. ಹರತಾಳು ಹಾಲಪ್ಪ ಯಡಿಯೂರಪ್ಪ ಆಪ್ತರಾಗಿರುವ ಕಾರಣ ಅವರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ.

ಹೀಗಾಗಿ ಈ ಮೂವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಇನ್ನು ಮಧ್ಯ ಕರ್ನಾಟಕದ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್-ಹಿರಿಯೂರು, ಎಂ.ಪಿ.ರೇಣುಕಾಚಾರ್ಯ- ಹೊನ್ನಾಳಿ, ಜಿ.ಎಚ್.ತಿಪ್ಪಾರೆಡ್ಡಿ- ಚಿತ್ರದುರ್ಗ, ಮತ್ತು ಬಿ.ಶ್ರೀರಾಮುಲು ಅವರಿಗೆ ಮಹತ್ವದ ಹುದ್ದೆ ನೀಡುವ ಸಾಧ್ಯತೆಯಿದೆ.

ಚಿತ್ರದುರ್ಗದಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಬಿಜೆಪಿ ಹೈಕಮಾಂಡ್ ಈ ಭಾಗದ ಜನಪ್ರತಿನಿಧಿಗಳಿಗೆ ಪ್ರಾಶಸ್ತ್ಯ ನೀಡುವ ಸಾಧ್ಯತೆಯಿದೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೊಲ್ಲ ಸಮುದಾಯದವರಾಗಿದ್ದಾರೆ. ಚಿತ್ರದುರ್ಗ, ತುಮಕೂರು, ಬಳ್ಳಾರಿ, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲಾಯಲ್ಲಿ ಈ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಆದರೆ, ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಆರ್‍ಎಸ್‍ಎಸ್ ಬೆಂಬಲವಿಲ್ಲ, ಎರಡು ಬಾರಿ ಶಾಸಕಿಯಾಗಿದ್ದಾರೆ. ತಿಪ್ಪಾರೆಡ್ಡಿ ಹಿರಿಯ ಶಾಸಕರಾಗಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಡ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ದಾವಣಗೆರೆ ಶಾಸಕ ರವೀಂದ್ರ ನಾಥ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, ಅವರ ವಯಸ್ಸು ಅವರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‍ನಲ್ಲಿ ನಾಯಕತ್ವದ ಬದಲಾವಣೆಯನ್ನು ಮತ್ತು ಹಿರಿಯ ಮಂತ್ರಿಗಳನ್ನು ಕೈಬಿಡುವ ವಿಷಯ ಪ್ರಸ್ತಾಪಿಸಿದ್ದು, ರಾಜಕೀಯ ವಲಯಗಳಲ್ಲಿ ಬಿರುಗಾಳಿ ಸೃಷ್ಟಿಸಿತ್ತು.

Facebook Comments