ಪ್ರಮುಖ ಕಡತಗಳಿಗೆ ಸಹಿ ಹಾಕದಂತೆ ಸಚಿವರಿಗೆ ಸಿಎಂ ಅಂಕುಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.14- ಯಾವುದೇ ಸಂದರ್ಭ ದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಖಾತೆ ಹೊಂದಿರುವ ಸಚಿವರು ಪ್ರಮುಖ ನಿರ್ಧಾರ ಕೈಗೊಳ್ಳುವುದಾಗಲಿ ಇಲ್ಲವೇ ಕಡತಕ್ಕೆ ಸಹಿ ಹಾಕಬಾರದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಡಿ.22ರ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಖುದ್ದು ಮುಖ್ಯಮಂತ್ರಿಯೇ ಬಹಿರಂಗಪಡಿಸಿದ್ದಾರೆ. ಸದ್ಯ ಸಂಪುಟದಲ್ಲಿ 16 ಖಾತೆಗಳು ಖಾಲಿಯಿವೆ. ಹೆಚ್ಚುವರಿಯಾಗಿ ಸಚಿವರಿಗೆ 14 ಖಾತೆಗಳ ಹೊಣೆಗಾರಿಕೆ ನೀಡಲಾಗಿದೆ.  ಕಳೆದ ಆ.20ರಂದು ಸಂಪುಟ ವಿಸ್ತರಣೆ ಮಾಡಿದ್ದ ಬಿಎಸ್‍ವೈ ಅವರು ತಮ್ಮ ಸಂಪುಟಕ್ಕೆ 17 ಮಂದಿ ಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.
ಹೆಚ್ಚವರಿಯಾಗಿ ಉಳಿದಿದ್ದ ಖಾತೆಗಳನ್ನು ಮಂತ್ರಿಗಳಿಗೆ ಹಂಚಿಕೆ ಮಾಡಿದ್ದರು.

ಇದೀಗ ಉಪಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದ್ದು ಮುಂದಿನ ವಾರದ ನಂತರ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಹೆಚ್ಚುವರಿ ಖಾತೆಗಳನ್ನು ಹೊಂದಿರುವ ಸಚಿವರು ಯಾವುದೇ ಕಾರಣಕ್ಕೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಾಗಲಿ ಇಲ್ಲವೇ ಕಡತಗಳಿಗೆ ಸಹಿ ಹಾಕದಂತೆ ಸೂಚನೆ ಕೊಟ್ಟಿದ್ದಾರೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಅಪರ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಬಿಎಸ್‍ವೈ ಅವರು ಮೌಖಿಕ ಸೂಚನೆ ಕೊಟ್ಟಿದ್ದು, ನನ್ನ ಗಮನಕ್ಕೆ ತರದೆ ಹೆಚ್ಚುವರಿ ಖಾತೆಗಳ ಕಡತಗಳಿಗೆ ಸಹಿ ಹಾಕದಂತೆ ತಾಕೀತು ಮಾಡಿದ್ದಾರೆ. ಸಚಿವರು ಪ್ರಮುಖ ನಿರ್ಧಾರಗಳನ್ನು ಕೈಗೊಂಡರೆ ಮುಂದೆ ಸಂಪುಟಕ್ಕೆ ಸೇರ್ಪಡೆಯಾಗುವ ನೂತನ ಸಚಿವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಬಹುದೆಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಗುಪ್ತಚರ, ಬೆಂಗಳೂರು ನಗರಾಭಿವೃದ್ದಿ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಇಂಧನ, ಭಾರೀ ನೀರಾವರಿ, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.ಉಳಿದಂತೆ

ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿಗೆ ಸಕ್ಕರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಯುವಜನ ಮತ್ತು ಕ್ರೀಡೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‍ಗೆ ಸಾರ್ವಜನಿಕ ಉದ್ಯಮ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್‍ಗೆ ಕಾರ್ಮಿಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲುಗೆ ಹಿಂದುಳಿದ ವರ್ಗಗಳ ಕಲ್ಯಾಣ, ವಸತಿ ಸಚಿವ ವಿ.ಸೋಮಣ್ಣನವರಿಗೆ ತೋಟಗಾರಿಕೆ ಮತ್ತು ರೇಷ್ಮೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಸಹಕಾರ,

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಗೆ ಆಹಾರ ಹಾಗೂ ನಾಗರಿಕ ಪೂರೈಕೆ, ಸಿ.ಸಿ.ಪಾಟೀಲ್‍ಗೆ ಅರಣ್ಯ, ಎಚ್.ನಾಗೇಶ್‍ಗೆ ಕೌಶಲ್ಯಾಭಿವೃದ್ದಿ ಹಾಗೂ ಪ್ರಭು ಚವ್ಹಾಣ್ ಅವರಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಹೊಣೆಗಾರಿಕೆ ನೀಡಲಾಗಿದೆ.

ಉಪಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕಾಗಿರುವುದರಿಂದ ಹೆಚ್ಚುವರಿ ಖಾತೆಗಳ ಸಚಿವರು ಪ್ರಮುಖ ನಿರ್ಧಾರಗಳಿಗೆ ಸಿಎಂ ಬ್ರೇಕ್ ಹಾಕಿದ್ದಾರೆ.
ಇದು ಅತಿ ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

Facebook Comments