ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿಯಲ್ಲಿ ಬೀಡುಬಿಟ್ಟ ಆಕಾಂಕ್ಷಿಗಳ ದಂಡು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.30- ಸಂಪುಟ ರಚನೆ ಯಾವುದೇ ಕ್ಷಣದಲ್ಲಿ ನಡೆಯಬಹುದು ಎಂಬ ಸುಳಿವು ಸಿಗುತ್ತಿದ್ದಂತೆ ಆಕಾಂಕ್ಷಿಗಳ ದಂಡು ನವದೆಹಲಿಯಲ್ಲಿ ಬೀಡುಬಿಟ್ಟಿದೆ. ಇಂದು ಕೂಡ ಹಲವು ಸಚಿವ ಆಕಾಂಕ್ಷಿಗಳು ನವದೆಹಲಿಗೆ ತೆರಳಿದ್ದು, ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಮೇಲೆ ಒತ್ತಡ ಹಾಕುತ್ತಿದ್ದಾರೆ.

ನಿನ್ನೆಯಷ್ಟೇ ಮಾಜಿ ಸಚಿವರಾದ ಉಮೇಶ್ ಕತ್ತಿ, ಆರ್.ಅಶೋಕ್ ನವದೆಹಲಿಗೆ ತೆರಳಿದ್ದರು. ಇದೀಗ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಪಿ.ಯೋಗೇಶ್ವರ್, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಅರವಿಂದ ಬೆಲ್ಲದ್ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಸೇರಿದಂತೆ ಮತ್ತಿತರರು ತಮಗೆ ಇರುವ ಪ್ರಭಾವ ಬಳಸಿಕೊಂಡು ಸಂಪುಟ ಸೇರಲು ಹರಸಾಹಸ ನಡೆಸುತ್ತಿದ್ದಾರೆ.

ಸರ್ಕಾರ ರಚನೆಗೆ ಕಾರಣರಾದವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡುವ ಅಗತ್ಯವಿರುವುದರಿಂದ ಕನಿಷ್ಠ ಪಕ್ಷ 13 ಸ್ಥಾನಗಳನ್ನು ನೀಡಬೇಕು. ಉಳಿಯುವ 21 ಸ್ಥಾನಗಳಲ್ಲಿ ನಮ್ಮನ್ನು ಎಲ್ಲಿ ಕೈ ಬಿಡಬಹುದೆಂಬ ಆತಂಕಕ್ಕೆ ಒಳಗಾಗಿರುವ ಆಕಾಂಕ್ಷಿಗಳು ಸಾಧ್ಯವಾದ ಎಲ್ಲ ತಂತ್ರ ಬಳಸಿ ಮೊದಲ ಬಾರಿಗಾದರೂ ಗೂಟದ ಕಾರು ಏರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಎಲ್ಲವೂ ಹೈಕಮಾಂಡ್ ನಿರ್ದೇಶನದಂತೆ ನಡೆಯುತ್ತಿರುವುದರಿಂದ ಈ ಬಾರಿ ಸಂಪುಟ ರಚನೆಯಲ್ಲಿ ಯಾರಿಗೆ ಯಾವ ಸ್ಥಾನ ಸಿಗಲಿದೆ ಎಂಬುದು ಸ್ವತಃ ಶಾಸಕರಿಗೂ ಗೊತ್ತಾಗುತ್ತಿಲ್ಲ.ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗುತ್ತದೆ ಎಂಬ ಪುಕಾರು ಹಬ್ಬಿರುವುದರಿಂದ ಈ ಬಾರಿ ಆಕಾಂಕ್ಷಿಗಳ ದಂಡು ದೆಹಲಿಯಲ್ಲಿ ಲಾಬಿ ಆರಂಭಿಸಿದ್ದಾರೆ. ಅಂತಿಮವಾಗಿ ಈ ಬಾರಿ ಸಂಪುಟದಲ್ಲಿ ಯಾರಿಗೆ ಅದೃಷ್ಟ ಒಲಿಯುತ್ತದೆ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.

Facebook Comments