ಸಧ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.21- ಒಂದು ವೇಳೆ ಸೋಮವಾರದೊಳಗೆ ಸಚಿವ ಸಂಪುಟ ವಿಸ್ತರಣೆಯಾಗದಿದ್ದರೆ, ಮೂರು ಕ್ಷೇತ್ರಗಳ ಉಪಚುನಾವಣೆ ಮುಗಿಯುವವರೆಗೂ ನೆನಗುದಿಗೆ ಬೀಳುವುದು ಬಹುತೇಕ ಖಚಿತವಾಗಿದೆ. ಮೂರು ದಿನದೊಳಗೆ ದೆಹಲಿ ವರಿಷ್ಠರಿಂದ ಪಟ್ಟಿ ಬರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆದರೆ ಈವರೆಗೂ ಯಾವುದೇ ಬೆಳವಣಿಗೆಗಳು ನಡೆಯದಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮತ್ತೆ ನೆನೆಗುದಿಗೆ ಬಿದ್ದರೂ ಅಚ್ಚರಿಯಿಲ್ಲ.

ಸರ್ಕಾರ ರಚನೆ, ಸಂಪುಟಕ್ಕೆ ತೆಗೆದುಕೊಳ್ಳು ವುದು, ಟಿಕೆಟ್ ಹಂಚಿಕೆ ಸೇರಿದಂತೆ ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ನಿರ್ಧರಿಸುತ್ತಾರೆ. ಸದ್ಯ ಅವರು ಇಂದಿನಿಂದ ತಮಿಳುನಾಡು ಪ್ರವಾಸದಲ್ಲಿರುವುದರಿಂದ ಸೋಮವಾರದೊಳಗೆ ಹಸಿರುನಿಶಾನೆ ತೋರುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ.

ಬುಧವಾರ ದೆಹಲಿಗೆ ತೆರಳಿದ್ದ ಬಿಎಸ್‍ವೈ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ, ಪುನಾರಚನೆಗೆ ಸಂಬಂಸಿದಂತೆ ಸಚಿವರ ಪಟ್ಟಿಯನ್ನು ನೀಡಿ ಬಂದಿದ್ದರು. ಪಕ್ಷದ ಪ್ರಮುಖರ ಜೊತೆ ಚರ್ಚೆ ಮಾಡಿ ಅಭಿಪ್ರಾಯವನ್ನು ವ್ಯಕ್ತಪಡಿಸುವುದಾಗಿ ನಡ್ಡ ಹೇಳಿದ್ದರು. ಆದರೆ ಈಗಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಸದ್ಯ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಲಕ್ಷಣಗಳು ಗೋಚರಿಸುತ್ತವೆ.

ಸಿಎಂ ಯಡಿಯೂರಪ್ಪ ದೆಹಲಿಯಿಂದ ವಾಪಸ್ಸಾಗಿ ಮೂರು ದಿನಗಳಾದರೂ ಸಿಎಂಗೆ ಇನ್ನೂ ವರಿಷ್ಠರಿಂದ ಕರೆ ಬಂದಿಲ್ಲ. ಸಿಎಂ ಮತ್ತು ಆಕಾಂಕ್ಷಿಗಳು ವರಿಷ್ಠರ ಕರೆಗಾಗಿ ಕಾಯುತ್ತಿದ್ದಾರೆ. ಇಂದು ಅಥವಾ ನಾಳೆ ಕರೆ ಬಂದರೆ ಮಾತ್ರ ಸೋಮವಾರ ಸಂಪುಟ ಸರ್ಜರಿ ಸಾಧ್ಯತೆಯಿದೆ ಇಲ್ಲದಿದ್ದರೆ ಮುಂದೂಡಿಕೆ ಖಚಿತ.

ಇಂದು ಅಥವಾ ನಾಳೆಯೊಳಗೆ ಸಂಪುಟಕ್ಕೆ ಸರ್ಜರಿಗೆ ಅನುಮತಿ ದೊರೆಯದಿದ್ದರೆ ಮತ್ತೆ ಯಾವಾಗ ನಡೆಯುತ್ತೇ? ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಬರುವವರೆಗೂ ಸಂಪುಟ ವಿಸ್ತರಣೆ ನಡೆಯುವುದಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ. ಅಮಿತ್ ಷಾ ಅವರು ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿವರೆಗೂ ಸಂಪುಟ ಸರ್ಜರಿ ಅನುಮಾನವೇ. ಈಗಾಗಲೇ ಕಮಲ ಪಾಳಯದಲ್ಲೂ ಅಮಿತ್ ಷಾ ಬರೋವರೆಗೂ ಸಂಪುಟ ವಿಸ್ತರಣೆಯಾಗುವುದಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ.

ಉಪಚುನಾವಣೆ ಗುಮ್ಮ: ಇನ್ನೊಂದೆಡೆ ರಾಜ್ಯದಲ್ಲಿ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಬೇಕಿದೆ. ಕೇಂದ್ರ ಚುನಾವಣಾ ಆಯೋಗ ಯಾವುದೇ ಸಂದರ್ಭದಲ್ಲಿ ದಿನಾಂಕವನ್ನು ಘೋಷಣೆ ಮಾಡಬಹುದು.\

ಒಂದು ವೇಳೆ ಚುನಾವಣಾ ಆಯೋಗ ದಿನಾಂಕವನ್ನು ಸದ್ಯದಲ್ಲೇ ನಿಗದಿಪಡಿಸಿದರೆ ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ರೀತಿಯ ಆಡಳಿತಾತ್ಮಕ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ.

Facebook Comments