ಗ್ರಾ.ಪಂ ಚುನಾವಣಾ ಘೋಷಣೆ, ನೆನೆಗುದಿಗೆ ಬಿತ್ತು ಸಂಪುಟ ವಿಸ್ತರಣೆ..!
ಬೆಂಗಳೂರು, ನ.30- ಗ್ರಾಮ ಪಂಚಾಯ್ತಿ ಚುನಾವಣೆಗೆ ಆಯೋಗ ಮುಹೂರ್ತ ನಿಗದಿಪಡಿಸಿರುವುದರಿಂದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮತ್ತೆ ನೆನೆಗುದಿಗೆ ಬಿದ್ದಿದೆ. ವೈದ್ಯ ಹೇಳಿದ್ದೂ ಅದನ್ನೇ ರೋಗಿ ಬಯಸಿದ್ದೂ ಅದನ್ನೇ ಎಂಬಂತೆ ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಬೀಸೋ ದೊಣ್ಣೆಯಿಂದ ಪಾರಾಗಿದ್ದಾರೆ.
ಈ ವಾರದಲ್ಲಿ ಸಚಿವರಾಗುತ್ತೇವೆಂದು ಮನಸ್ಸಿನಲ್ಲೇ ಮಂಡಕ್ಕಿ ಮೇಯ್ದಿದ್ದ ಆಕಾಂಕ್ಷಿಗಳು ಜನವರಿ ವರೆಗೂ ಕಾಯಲೇಬೇಕು. ಆ ವೇಳೆಗೆ ಕೇಂದ್ರ ಚುನಾವಣಾ ಆಯೋಗವೇನಾದರೂ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಪಡಿಸಿದರೆ ಮತ್ತೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಇನ್ನಷ್ಟು ವಿಳಂಬವಾಗುವುದರಲ್ಲಿ ಸಂಶಯವೇ ಇಲ್ಲ.
ಮುಂದಿನ ಬುಧವಾರ ಅಥವಾ ಶುಕ್ರವಾರ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಪುನಃ ಸಾಧ್ಯವಾದರೆ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ತುದಿಗಾಲಲ್ಲೇ ನಿಂತಿದ್ದರು. ನಾಳೆ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಭೇಟಿಯಾಗಿ ಮಾತುಕತೆ ನಡೆಸಲು ಬಿಎಸ್ವೈ ತೀರ್ಮಾನಿಸಿದ್ದರು.
ಇದೀಗ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿರುವುದರಿಂದ ಇಂದಿನಿಂದಲೇ ರಾಜ್ಯಾದ್ಯಂತ ನೀತಿಸಂಹಿತೆ ಜಾರಿಯಲ್ಲಿದೆ. ಸಾಮಾನ್ಯವಾಗಿ ನೀತಿಸಂಹಿತೆ ಇದ್ದ ವೇಳೆ ಸರ್ಕಾರ ಯಾವುದೇ ಪ್ರಮುಖ ತೀರ್ಮಾನ ಗಳನ್ನು ಕೈಗೊಳ್ಳುವಂತಿಲ್ಲ. ಪ್ರತಿಯೊಂದಕ್ಕೂ ಆಯೋಗದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕಾಗುತ್ತದೆ.
ಗ್ರಾಪಂ ಚುನಾವಣೆಯು ಪಕ್ಷ ರಹಿತವಾಗಿ ನಡೆಯಲಿದ್ದು, ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆ ಮೇಲೆ ನಡೆಯುವುದಿಲ್ಲ. ರಾಜ್ಯ ಸರ್ಕಾರ ಸಂಪುಟ ವಿಸ್ತರಣೆ/ಪುನಾರಚನೆ ಮಾಡಲು ಆಯೋಗದ ಅನುಮತಿಯನ್ನು ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ರಾಜಕೀಯವನ್ನು ಗಮನಿಸಿದರೆ ಸಂಪುಟ ವಿಸ್ತರಣೆಯು ಮುಂದೂಡಲಿ ಎಂಬ ಬಯಕೆಯೇ ಬಹುತೇಕರಲ್ಲಿದೆ. ಈಗ ಯಾರನ್ನೇ ತೆಗೆದುಕೊಂಡರೂ, ಇಲ್ಲವೇ ಇನ್ನಾರನ್ನಾದರೂ ಕೈ ಬಿಟ್ಟರೂ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಆತಂಕವಿದೆ.
ಸದ್ಯ ಸಂಪುಟದಲ್ಲಿ 7 ಸ್ಥಾನಗಳು ಖಾಲಿ ಇದ್ದು, ಎರಡು ಡಜನ್ಗೂ ಅಧಿಕ ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ಖಾತರಿಯಾಗಿದೆ.
ಉಳಿದಂತೆ ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರಾಜುಗೌಡನಾಯಕ್, ಸುನಿಲ್ಕುಮಾರ್, ಅಪ್ಪಚ್ಚುರಂಜನ್, ಎಸ್.ಅಂಗಾರ, ತಿಪ್ಪಾರೆಡ್ಡಿ, ಚಂದ್ರಪ್ಪ, ಶಿವನಗೌಡ ನಾಯಕ್, ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕರು ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಸಂಪುಟ ವಿಸ್ತರಣೆಗೆ ವರಿಷ್ಠರು ಅನುಮತಿ ಕೊಟ್ಟದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಸಂಪುಟ ಪುನಾರಾಚನೆಗೆ ಪಟ್ಟು ಹಿಡಿದಿದ್ದಾರೆ. ಇದರ ನಡುವೆ ನಾಯಕತ್ವ ಬದಲಾವಣೆಯ ವದಂತಿಗಳು ಕೇಳಿ ಬಂದಿವೆ. ಹೀಗೆ ಗೊಂದಲದ ಗೂಡಾಗಿರುವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸದ್ಯಕ್ಕಂತೂ ನಡೆಯುವ ಲಕ್ಷಗಳು ಕ್ಷೀಣಿಸಿವೆ.