ಖಾತೆ ಅದಲು ಬದಲು : ಒಕ್ಕಲಿಗ ಸಮುದಾಯಕ್ಕೆ ಆಘಾತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಖಾತೆ ಬದಲಾವಣೆಯ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಸಚಿವರನ್ನೇ ನೇರ ಟಾರ್ಗೆಟ್ ಮಾಡಲಾಗಿದೆ ಎಂಬ ಅಸಮಾಧಾನ ಸ್ಫೋಟಗೊಂಡಿದೆ. ಪ್ರಮುಖವಾಗಿ ಕೋವಿಡ್ ಸಂದರ್ಭದಲ್ಲಿ ಹಗಲಿರುಳೆನ್ನದೆ ಶ್ರಮಿಸಿ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದಿದ್ದ ಸಚಿವ ಡಾ.ಸುಧಾಕರ್ , ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಹೊಸ ಕಾಯಕಲ್ಪ ನೀಡಿದ್ದ ಕೆ.ಗೋಪಾಲಯ್ಯ ಮತ್ತು ತೋಟಗಾರಿಕೆ , ರೇಷ್ಮೆ ಹಾಗೂ ಸಕ್ಕರೆ ಸಚಿವರಾಗಿದ್ದ ನಾರಾಯಣಗೌಡ ಅವರ ಖಾತೆಗಳನ್ನು ಬದಲಾವಣೆ ಮಾಡಿರುವುದು ಬಿಜೆಪಿ ವಲಯದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕೋವಿಡ್ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಆರೋಗ್ಯ ಇಲಾಖೆಗೆ ಒಳ್ಳೆಯ ಹೆಸರು ಬರುವಂತೆ ಮಾಡಿದ ಸುಧಾಕರ್ ಅವರಿಂದಲೂ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕೈ ಬಿಟ್ಟಿರುವುದು ಒಕ್ಕಲಿಗ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಒಳ್ಳೆಯ ಕೆಲಸ ಮಾಡುವವರಿಗೆ ಬೆನ್ನು ತಟ್ಟಿ ನಿಲ್ಲಬೇಕಾದಂತಹ ಮುಖ್ಯಮಂತ್ರಿಗಳು ದುಡುಕಿನ ನಿರ್ಧಾರ ಕೈಗೊಂಡು ಖಾತೆ ಬದಲಾವಣೆ ಮಾಡಿರುವುದು ಒಕ್ಕಲಿಗರ ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ.

ಇಂತಹ ಕ್ರಮಗಳಿಂದ ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಸಂದೇಶ ನೀಡಿದಂತಾಗುತ್ತದೆ. ಇದರಿಂದ ಬಿಜೆಪಿಯ ಕಡೆ ಸಮುದಾಯವನ್ನು ಸೆಳೆಯುವ ಯತ್ನಕ್ಕೂ ಭಾರೀ ಹಿನ್ನೆಡೆಯಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಖಾತೆ ಬದಲಾವಣೆಯಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಂದಾಗುವ ಆಗು ಹೋಗುಗಳ ಬಗ್ಗೆ ಗಮನ ಹರಿಸಬೇಕಾಗಿತ್ತು. ಸಕಾರಣವಿಲ್ಲದೆ ಖಾತೆಗಳ ಬದಲಾವಣೆ ಮಾಡಿರುವುದು ಸರಿಯಲ್ಲ ಎಂಬ ಮಾತುಗಳು ವ್ಯಾಪಕವಾಗಿ ಒಕ್ಕಲಿಗ ಸಮುದಾಯದಲ್ಲಿ ಕೇಳಿ ಬರುತ್ತಿವೆ.

ಬಿಜೆಪಿ ವಸ್ತು ಸ್ಥಿತಿಯನ್ನು ಅರಿತು ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಇದರ ಪರಿಣಾಮವನ್ನು ಅನಿವಾರ್ಯವಾಗಿ ಎದುರಿಸಲೇಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.  ಈಗಾಗಲೇ ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮುದಾಯವನ್ನು ಸೆಳೆಯುವ ತಂತ್ರಗಾರಿಕೆ ನಡೆಯುತ್ತಿದೆ. ಇದರ ನಡುವೆ ಪಕ್ಷ ಸಂಘಟನೆ ಹಾಗೂ ಸರ್ಕಾರದಲ್ಲಿ ಉತ್ತಮವಾಗಿ ಕೆಲಸ ಮಾಡುವಂತಹ ಒಕ್ಕಲಿಗ ಸಮುದಾಯದ ಸಚಿವರನ್ನು ಕಡೆಗಣಿಸಿರುವುದು ಅವರಿಗೆ ಮಾಡಿರುವ ಅಪಮಾನ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಶಾಸಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದೆ ಆಗುವಂತಹ ಪರಿಣಾಮಗಳನ್ನು ಗಮನದಲ್ಲಿರಿಸಿ ರಾಜ್ಯದಲ್ಲಿ ಪ್ರಬಲರಾಗಿರುವ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಿದರೆ ಮುಂದೆ ಬಿಜೆಪಿಗೂ ದೊಡ್ಡ ನಷ್ಟವಾಗುವುದರಲ್ಲಿ ಅನುಮಾನವಿಲ್ಲ. ಹಳೆ ಮೈಸೂರು ಭಾಗದಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಿಸಲು ಒಂದೆಡೆ ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಆದರೆ ರಾಜ್ಯ ನಾಯಕರು ಆ ಭಾಗದ ಜನಪ್ರತಿನಿಧಿಗಳು, ಒಕ್ಕಲಿಗ ಸಮುದಾಯವನ್ನು ಕಡೆಗಣಿಸುವಂತಹ ಕಾರ್ಯವನ್ನು ಮಾಡುತ್ತಿರುವುದು ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ.

ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಸಚಿವರು ಪಾಲ್ಗೊಳ್ಳಬಾರದು ಮತ್ತು ಖಾತೆ ಬದಲಾವಣೆಯನ್ನು ಒಪ್ಪಬಾರದು ಎಂದು ಒತ್ತಾಯಿಸಿದ್ದಾರೆ.

Facebook Comments