ಸಂಪುಟ ಪುನರ್ ರಚನೆ ಒತ್ತಡದಲ್ಲಿ ಸಿಎಂ, ಆಕಾಂಕ್ಷಿಗಳಲ್ಲಿ ಹೆಚ್ಚಿದ ಎದೆಬಡಿತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.17- ಸಚಿವ ಸಂಪುಟ ಪುನರ್ ರಚನೆ ಒತ್ತಡದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಒಪ್ಪಿಗೆ ಪಡೆಯಲು ದೆಹಲಿಗೆ ತೆರಳಿರುವುದು ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಾಗಿದೆ.  ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂದು ಆಕಾಂಕ್ಷಿಗಳು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಹೀಗಾಗಿ ಸಂಪುಟ ವಿಸ್ತರಣೆಯೋ ಇಲ್ಲವೇ ಪುನಾರಚನೆಯೋ ಎಂಬುದು ದೆಹಲಿ ವರಿಷ್ಠರ ಅಣತಿ ಮೇರೆಗೆ ನಿರ್ಧಾರವಾಗಲಿದೆ. ಮುಖ್ಯಮಂತ್ರಿಗಳ ಅಧಿಕೃತ ಪ್ರವಾಸದಲ್ಲಿ ಪಕ್ಷದ ಯಾವುದೇ ವರಿಷ್ಠರನ್ನು ಭೇಟಿಯಾಗುವ ಸಮಯ ನಿಗದಿಯಾಗಿಲ್ಲವಾದರೂ ಕೊನೆ ಕ್ಷಣದಲ್ಲಿ ಮಾತುಕತೆ ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಪ್ರವಾಹದಿಂದ ತತ್ತರಿಸಿರುವ ಕರ್ನಾಟಕಕ್ಕೆ ತಕ್ಷಣವೇ ಹೆಚ್ಚಿನ ನೆರೆ ಪರಿಹಾರ ಬಿಡುಗಡೆ ಮಾಡುವುದು ಹಾಗೂ ನೆನೆಗುದಿಗೆ ಬಿದ್ದಿರುವ ಕೆಲವು ಯೋಜನೆಗಳಿಗೆ ಅನುಮತಿ ನೀಡಬೇಕೆಂದು ಸಂಬಂಧಪಟ್ಟ ಇಲಾಖೆ ಸಚಿವರನ್ನು ಸಿಎಂ ಭೇಟಿ ಮಾಡಲಿದ್ದಾರೆ.

ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಯ ಚಾಣಕ್ಯಪುರಿಯಲ್ಲಿ ನಿರ್ಮಣವಾಗುತ್ತಿರುವ ಕರ್ನಾಟಕ ಭವನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಕೇಂದ್ರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣದ ಬಗ್ಗೆ ಚರ್ಚಿಸಲಿದ್ದಾರೆ. ಉಳಿದಂತೆ ಅವರ ದೆಹಲಿ ಭೇಟಿಯಲ್ಲಿ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಮಯ ನಿಗದಿಯಾಗಿಲ್ಲ. ಹೀಗಾಗಿ ಬಿಎಸ್‍ವೈ ಅವರ ದೆಹಲಿ ಭೇಟಿ ಸಾಕಷ್ಟು ಗೊಂದಲದಲ್ಲೇ ಮುಂದುವರೆದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಉದ್ದೇಶ ಹೊಂದಿದ್ದು, ದೆಹಲಿಗೆ ಹೊರಟಿರುವ ಸಿಎಂ ಅಲ್ಲೇ ಮೂರು ದಿನ ವಾಸ್ತವ್ಯ ಹೂಡಲಿದ್ದಾರೆ.  ಇಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಇರುವುದರಿಂದ ಅವರಿಗೆ ಶುಭಾಶಯ ಕೋರುವುದು ಮತ್ತು ತಮ್ಮ ಸರ್ಕಾರ ಒಂದು ವರ್ಷ ಪೂರೈಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದು ಮುಖ್ಯ ಸಂಗತಿಯಾಗಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಯಾರನ್ನೂ ಭೇಟಿಯಾಗದಿರಲು ಮೋದಿ ನಿರ್ಧರಿಸಿರುವುದರಿಂದ ಯಡಿಯೂರಪ್ಪನವರಿಗೆ ಸಮಯ ಕೊಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇದಲ್ಲದೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೇಳಲಿದ್ದಾರೆ. ಮೂರು ದಿನ ದೆಹಲಿಯಲ್ಲಿರುವ ಯಡಿಯೂರಪ್ಪ ಸಂಪುಟ ಪುನರ್ ರಚನೆಗೆ ಒಪ್ಪಿಗೆ ಪಡೆಯಲು ಒತ್ತು ನೀಡಲಿದ್ದಾರೆ. ಯಡಿಯೂರಪ್ಪ ಪ್ರವಾಸ ದ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಕೂಡ ದೆಹಲಿಗೆ ದಾಂಗುಡಿ ಇಡುತ್ತಿದ್ದಾರೆ.

ಕೊರೊನಾ ಹಿನ್ನೆಲೆ ಗಣ್ಯರ ಭೇಟಿಗೆ ಪ್ರಧಾನಿಯವರು ನಿರಾಕರಿಸಿದ್ದು, ಒಂದು ವೇಳೆ ಅವಕಾಶ ಸಿಕ್ಕಲ್ಲಿ ಮೋದಿಯವರನ್ನು ಭೇಟಿ ಮಾಡುವ ಸಾಧ್ಯತೆಗಳಿದೆ. ಮತ್ತೊಂದೆಡೆ ಸಂಪುಟ ವಿಸ್ತರಣೆಯ ಸವಾಲು ಕೂಡ ಬಿಎಸ್‍ವೈ ಎದುರಿಗಿದೆ.

ಹೈಕಮಾಂಡ್ ಭೇಟಿ ವೇಳೆ ಸಂಪುಟ ವಿಸ್ತರಣೆನಾ ಅಥವಾ ಪುನಾರಚನೆಯೇ ಅನ್ನೋ ಬಗ್ಗೆ ಚರ್ಚೆ ಮಾಡಲಿದ್ದಾರೆ. ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ. ಸದ್ಯ 6 ಸ್ಥಾನಗಳು ಖಾಲಿ ಇದ್ದು 4 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಸಚಿವ ಸ್ಥಾನಕ್ಕಾಗಿ ಎಂಟಿಬಿ, ಯೋಗೇಶ್ವರ್, ವಿಶ್ವನಾಥ್, ಶಂಕರ್, ಕತ್ತಿ, ನಿರಾಣಿ, ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಯತ್ನಾಳ್, ಸುನೀಲ್ ಕುಮಾರ್, ಲಿಂಬಾವಳಿ ಸೇರಿ ಪಟ್ಟಿ ದೊಡ್ಡದಿದೆ. ಸಿಎಂ ದೆಹಲಿ ಭೇಟಿಗೂ ಮುನ್ನ ಸಚಿವ ರಮೇಶ್ ಜÁರಕಿಹೋಳಿ ಇಲಾಖೆ ಕಾರ್ಯದ ನೆಪದಲ್ಲಿ ದೆಹಲಿ ತೆರಳಿದ್ದು ಡಿಸಿಎಂ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ.

ನಿರಾಣಿ, ರೇಣುಕಾಚಾರ್ಯ ಕೂಡ ದೆಹಲಿಯಲ್ಲೇ ಇದ್ದು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಾದ ಬಳಿಕ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡಲಿದ್ದಾರೆ. ನಡ್ಡಾ ಜತೆ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆಮಾಡಲಿದ್ದಾರೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಅವರಿಲ್ಲದೆ ಸಂಪುಟ ಪುನರ್ ರಚನೆಗೆ ಜೆ.ಪಿ. ನಡ್ಡಾ ಅವರಿಂದ ಗ್ರೀನ್ ಸಿಗ್ನಲ್ ಸಿಗುತ್ತಾ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಅಮಿತ್ ಶಾ ಅಲಭ್ಯದಿಂದ ಸಂಪುಟ ಕಸರತ್ತು ನೆನೆಗುದಿಗೆ ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ.

Facebook Comments