ಸಂಪುಟ ಪುನಾರಚನೆ : ಯಾರು ಇನ್, ಯಾರು ಔಟ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ನಡೆಸಲು ಬಿಜೆಪಿ ವರಿಷ್ಠರು ಮುಂದಾಗಿದ್ದು, ಹೆಚ್ಚು ಕ್ರಿಯಾಶೀಲರಲ್ಲದ ಹಾಗೂ ಒಂದು ವರ್ಷದಲ್ಲಿ ನಿರೀಕ್ಷೆಯಷ್ಟು ಸಾಧನೆ ಮಾಡದ 6 ರಿಂದ 8 ಸಚಿವರನ್ನು ಕೈಬಿಟ್ಟು, ಸಂಪುಟ ಪುನಾರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ.

ಹೀಗಾಗಿ ಮೂರು ದಿನಗಳ ಕಾಲ ನವದೆಹಲಿಗೆ ತೆರಳಿರುವ ಅವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರು ಸೇರಿದಂತೆ ಮತ್ತಿತರರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಡಿಸಿಎಂ ಲಕ್ಷ್ಮಣ್ ಸವದಿ, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಸಿ.ಸಿ. ಪಾಟೀಲ್, ಕೋಟಾ ಶ್ರೀನಿವಾಸಪೂಜಾರಿ ಸೇರಿದಂತೆ ಆರು ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಖಾಲಿ ಇರುವ ಆರು ಸ್ಥಾನ ಸೇರಿ 10 ಜನ ಹೊಸಬರಿಗೆ ಅವಕಾಶ ಕೊಡಲಾಗುತ್ತಿದೆ. ಅಲ್ಲದೆ, ಎರಡು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಖಾಲಿ ಉಳಿದಿರುವ ಸಚಿವ ಸ್ಥಾನಗಳನ್ನು ಸೇರಿಸಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಸುಳ್ಯ ಶಾಸಕ ಅಂಗಾರ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮೇಲ್ಮನೆ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಹಿರಿಯ ಸಚಿವರಾದ ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರ ಖಾತೆಗಳನ್ನು ಬದಲಿಸು ಬಗ್ಗೆಯೂ ಚಿಂತನೆ ನಡೆದಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ವರಿಷ್ಠರು ಆಲೋಚಿಸಿದ್ದಾರೆ.

ಕೊರೋನಾ ಸೋಂಕು ಒಂದು ಹಂತಕ್ಕೆ ಬಂದು ಆರ್ಭಟ ಕಡಿಮೆಯಾಗುತ್ತಿದ್ದಂತೆಯೆ ಎಲ್ಲಿ ಸಚಿವ ಪದವಿ ಹೋಗಿ ಮಾಜಿಗಳಾಗಿ ಬಿಡುತ್ತೇವೋ ಎಂಬ ಅಳುಕು ಹಲವು ಸಚಿವರನ್ನು ಕಾಡಲಾರಂಭಿಸಿದೆ. ಕಳೆದ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪ್ರಾದೇಶಿಕ ಅಸಮತೋಲನ ಆಗಿತ್ತು. ರಾಜಕೀಯ ಕಾರಣಗಳಿಗೆ ಆಗ ಅದು ಅನಿವಾರ್ಯ ವಾಗಿತ್ತು. ಈ ಬಾರಿ ಪ್ರಾದೇಶಿಕ ತಾರತಮ್ಯ ಸರಿಪಡಿಸುವ ಕಡೆ ಒತ್ತು ನೀಡಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ.

ಪ್ರಾತಿನಿಧ್ಯ ಇಲ್ಲದ ಜಿಲ್ಲೆಗಳಿಗೆ ಅವಕಾಶ ನೀಡಲಿದ್ದಾರೆ. ಈಗಿನ ಸಂಪುಟದಲ್ಲಿ ಬೆಳಗಾವಿ, ಬೆಂಗಳೂರು ನಗರ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಹೀಗಾಗಿ ಈ ಜಿಲ್ಲೆಗಳ ಒಂದಿಬ್ಬರನ್ನು ಕೈಬಿಡಬಹುದು. ಅಲ್ಲದೆ, ಸರ್ಕಾರಕ್ಕಾಗಲಿ, ಪಕ್ಷದ ಬೆಳವಣಿಗೆಗಾಗಲಿ ಶ್ರಮವೇ ಹಾಕದವರನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿವಾದಕ್ಕೆ ಗುರಿಯಾಗಿರುವ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಡಾ.ಸುಧಾಕರ್, ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಕೆಲವು ಸಚಿವರ ಖಾತೆಗಳು ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿದೆ.  ಈವರೆಗೆ ತಮ್ಮ ಕೆಲಸದಲ್ಲಿ ಕಳಪೆ ನಿರ್ವಹಣೆ ಮಾಡಿರುವ ಸಚಿವರಿಗೆ ಕೋಕ್ ನೀಡಲಿದ್ದು, ಹೊಸಬರಿಗೆ ಸಂಪುಟದಲ್ಲಿ ಆದ್ಯತೆ ನೀಡಲು ಅಲೋಚನೆ ಮಾಡಲಾಗಿದೆ.ಇನ್ನೂ ಕೆಲವು ಸಚಿವರ ಕಾರ್ಯಕ್ಷಮತೆ ಆಧರಿಸಿ ಖಾತೆ ಬದಲಾವಣೆ ಮಾಡಲಾಗುವುದು ಎಂದೂ ಸಹ ಬಿಜೆಪಿ ಮೂಲಗಳು ಹೇಳಿವೆ.

ಆರಂಭದಲ್ಲಿ ಸಚಿವರು ಚೆನ್ನಾಗಿ ಕೆಲಸ ಮಾಡಿದರೂ ನಂತರ ಉತ್ಸಾಹ ಕಳೆದುಕೊಂಡು ಕಾಲ ಹರಣ ಮಾಡುತ್ತಿದ್ದರೆ, ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನೆ ಜವಾಬ್ದಾರಿ ನೀಡುವ ಸಾಧ್ಯತೆಯೂ ಬಹಳವಾಗಿದೆ ಎಂದು ಹೇಳಲಾಗಿದೆ.

ಪ್ರಾದೇಶಿಕ ಹಾಗೂ ಜಾತಿ ಸಮತೋಲನ ಕಾಪಾಡಲು ಕೆಲವು ಸಚಿವರಿಗೆ ಸಂಪುಟದಿಂದ ಕೊಕ್ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಳಗಾವಿಯಿಂದ ಒಬ್ಬರು, ಬೆಂಗಳೂರಿನಿಂದ ಇಬ್ಬರು ಹಾಗೂ ವೀರಶೈವ-ಲಿಂಗಾಯಿತ ಸಮುದಾಯಕ್ಕೆ ಸೇರಿದ ಇಬ್ಬರು ನಾಯಕರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ.

ನಾಲ್ಕೈದು ಸಚಿವರನ್ನು ಕೈಬಿಟ್ಟು ಹೊಸಬರು ಮತ್ತು ಕಠಿಣ ಪರಿಶ್ರಮ ಹಾಕುವವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ವರಿಷ್ಠರು ಈ ಹಿಂದೆಯೇ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದರು. ಆದರೆ, ಹಿರಿಯರನ್ನು ಕೈಬಿಡುವ ವಿಚಾರದಲ್ಲಿ ಯಡಿಯೂರಪ್ಪ ಕೊಂಚ ಹಿಂದೇಟು ಹಾಕುತ್ತಿದ್ದಾರೆ. ಈಗ ಸಂಪುಟ ಪೂರ್ಣ ಪ್ರಮಾಣದಲ್ಲಿ ರಚಿಸಬೇಕಾಗಿರುವುದರಿಂದ ಯಾವ ಯಾವ ಸಚಿವರನ್ನು ಕೈಬಿಡಬೇಕು ಎಂಬ ಬಗ್ಗೆ ವರಿಷ್ಠರ ಜತೆ ಚರ್ಚೆ ನಡೆಸಲಿದ್ದಾರೆ.

ಈಗ ಖಾಲಿ ಉಳಿದಿರುವ ಆರು ಸಚಿವ ಸ್ಥಾನಗಳ ಪೈಕಿ ಬಿಜೆಪಿ ಸರ್ಕಾರ ರಚಿಸಲು ನೆರವಿಗೆ ಬಂದಿದ್ದ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್ ಅವರಿಗೆ ಸಚಿವ ಸ್ಥಾನ ಖಾತರಿಯಾಗಿದೆ. ಎಚ್.ವಿಶ್ವನಾಥ್ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ತೀರಾಕಷ್ಟದಲ್ಲಿ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಅವರಿಗೆ ಸಚಿವ ಸ್ಥಾನ ನೀಡುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಹಿರಿಯ ಶಾಸಕ ಉಮೇಶ ಕತ್ತಿ ಅವರಿಗೆ ಯಡಿಯೂರಪ್ಪ ಅವರು ಈಗಾಗಲೇ ಹಲವು ಬಾರಿ ಸಚಿವ ಸ್ಥಾನದ ಭರವಸೆ ನೀಡಿರುವುದರಿಂದ ಅವರಿಗೆ ಈ ಬಾರಿ ನಿರಾಸೆಗೊಳಿಸುವುದಿಲ್ಲ. ಕತ್ತಿಯವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕಾದರೆ, ಆ ಜಿಲ್ಲೆಯ ಒಬ್ಬ ಸಚಿವರನ್ನು ಕೈಬಿಡುವುದು ಅನಿವಾರ್ಯವಾಗುತ್ತದೆ ಎಂದು ಮೂಲಗಳು ಹೇಳಿವೆ.

# ನಿಗಮಮಂಡಳಿ ಕಾರ್ಯಕರ್ತರಿಗೆ ಆದ್ಯತೆ: ಬಾಕಿ ಉಳಿದಿರುವ ನಿಗಮ ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಮೊದಲ ಪಟ್ಟಿಯಲ್ಲಿ ಶಾಸಕರಿಗೇ ಅವಕಾಶ ನೀಡಲಾಗಿತ್ತು. ಇದರಿಂದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಿಗಮ, ಮಂಡಳಿಗಳ ನೇಮಕಕ್ಕಾಗಿ ಕಾರ್ಯಕರ್ತರ ಪಟ್ಟಿಯೊಂದನ್ನು ನೀಡಿದ್ದರು. ಈಗ ಆ ಹೆಸರುಗಳನ್ನು ಮುಂದಿಟ್ಟುಕೊಂಡು ಅವರಿಗೆ ಅವಕಾಶ ಕಲ್ಪಿಸಲು ಪಟ್ಟಿ ತಯಾರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ವಾರ 20 ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಆ ಪೈಕಿ ಕೆಲವರು ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿಲ್ಲ. ಇನ್ನು ಕೆಲವರು ಮಂತ್ರಿ ಸ್ಥಾನಕ್ಕಾಗಿ ಯಡಿಯೂರಪ್ಪ ಅವರ ಬೆನ್ನು ಬಿದ್ದಿದ್ದಾರೆ.

# ಜಾತಿ ಪ್ರಾತಿನಿಧ್ಯ ಏರುಪೇರು: ಹಾಲಿ ಸಚಿವ ಸಂಪುಟದಲ್ಲಿ 7 ಲಿಂಗಾಯತರು, ಮೂವರು ಒಕ್ಕಲಿಗರು, ಇಬ್ಬರು ದಲಿತರು ಇದ್ದಾರೆ. ಹೊಸದಾಗಿ ಸೇರ್ಪಡೆಗೊಳ್ಳಲಿರುವವರಲ್ಲಿ ನಾಲ್ವರು ಒಕ್ಕಲಿಗರು, ಇಬ್ಬರು ಲಿಂಗಾಯತರಿದ್ದಾರೆ. ಅಂದರೆ, ಹೊಸ ಸಂಪುಟದಲ್ಲಿ 9 ಲಿಂಗಾಯತರು, 7 ಒಕ್ಕಲಿಗರಿಗೆ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಉಳಿದಂತೆ ದಲಿತರು, ಕುರುಬರು, ವಾಲ್ಮೀಕಿ, ಬ್ರಾಹ್ಮಣ ಸಮುದಾಯಕ್ಕೆ ತಲಾ 2, ಈಡಿಗ, ಲಂಬಾಣಿ, ಮರಾಠ, ಕ್ಷತ್ರಿಯ ಸಮುದಾಯಕ್ಕೆ ಒಂದು ಸ್ಥಾನ ದೊರೆಯಲಿದೆ. ಆದರೆ, ಎರಡೇ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಿ, ಯಾದವ, ರೆಡ್ಡಿ, ಬೋವಿ, ದಲಿತ (ಬಲಗೈ), ಬಂಟರು, ಸೇರಿದಂತೆ ಅನೇಕ ಜಾತಿಗಳು ಅವಕಾಶ ವಂಚಿತವಾಗುತ್ತವೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮೇಲೆ ಆಯಾ ಸಮುದಾಯ ಮುಖಂಡರು ಹಾಗೂ ಸ್ವಾಮೀಜಿಗಳ ಒತ್ತಡ ಹೆಚ್ಚಿದೆ.

# ಪ್ರಾತಿನಿಧ್ಯವಿಲ್ಲದ ಜಿಲ್ಲೆಗಳು: ಹಾಲಿ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಮಾತ್ರ ಪ್ರಾತಿನಿಧ್ಯವಿದೆ. ಹೊಸ ಸಂಪುಟದಲ್ಲಿ ಅದು ಬಳ್ಳಾರಿ, ಮಂಡ್ಯ, ಚಿಕ್ಕಬಳ್ಳಾಪುರ, ಉತ್ತರ ಕನ್ನಡಕ್ಕೆ ವಿಸ್ತರಣೆ ಆಗಬಹುದು. ಆಗಲೂ ವಿಜಯಪುರ, ದಾವಣಗೆರೆ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಮೈಸೂರು ಅವಕಾಶ ವಂಚಿತವಾಗಿವೆ. ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲ.

Facebook Comments