ಸಂಪುಟ ವಿಸ್ತರಣೆಯೋ, ಪುನಾರಚನೆಯೋ..? ಸಂಜೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.18- ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದು ಸಂಜೆಯೊಳಗೆ ನಿಗದಿಯಾಗಲಿದ್ದು, ದೆಹಲಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ.

ಇದರಿಂದಾಗಿ ಸೋಮವಾರ ಆರಂಭವಾಗಲಿರುವ ಮಳೆಗಾಲದ ಅಧಿವೇಶನದೊಳಗೆ ಸಂಪುಟ ವಿಸ್ತರಣೆಯಾಗು ವುದೋ ಇಲ್ಲವೇ ಮತ್ತೆ ಮುಂದಕ್ಕೆ ಹೋಗುವುದೋ ಎಂಬ ಆತಂಕ ಎಲ್ಲರಿಗೂ ಕಾಡುತ್ತಿದೆ.

ಅಲ್ಲದೆ ಕಳೆದ ಹಲವು ತಿಂಗಳಿನಿಂದ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ ಸಚಿವ ಆಕಾಂಕ್ಷಿಗಳಲ್ಲಿ ತಳಮಳ ಹಾಗೂ ಎದೆಬಡಿತ ಮತ್ತಷ್ಟು ಜೋರಾಗಿದೆ.  ಕಬ್ಬಿಣದ ಕಡಲೆಯಂತಾಗಿರುವ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಎರಡಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಒಲವು ತೋರಿದ್ದಾರೆ.

ಆದರೆ ಪ್ರತಿಯೊಂದಕ್ಕೂ ದೆಹಲಿ ನಾಯಕರ ಅನುಮತಿಯೇ ಅಂತಿಮವಾಗಿರುವುದರಿಂದ ಅವರ ತೀರ್ಮಾನದ ಮೇಲೆ ನಿರ್ಧಾರವಾಗಲಿದೆ.

ನವದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಉಭಯ ನಾಯಕರು ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆಸಿದ್ದು, ಸಚಿವ ಸಂಪುಟ ವಿಸ್ತರಣೆ, ಬೆಂಗಳೂರು ಮಹಾನಗರಕ್ಕೆ ವರ್ತುಲ ರೈಲು, ರಾಜ್ಯಕ್ಕೆ ಬಿಡುಗಡೆ ಯಾಗಬೇಕಾದ ನೆರೆ ಪರಿಹಾರ, ಜಿಎಸ್‍ಟಿ ಬಾಕಿ ಹಣ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ಅವರು ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಮಾಡುವ ಬಗ್ಗೆಯೂ ಮೋದಿ ಅವರ ಬಳಿ ಮಾತುಕತೆ ನಡೆಸಿದ್ದಾರೆ. ಸಾಮಾನ್ಯವಾಗಿ ಮೋದಿ ಅವರು ಇಂತಹ ಯಾವುದೇ ವಿಷಯಗಳ ಬಗ್ಗೆ ತೀರ್ಮಾನವನ್ನು ಕೈಗೊಳ್ಳುವ ಮುನ್ನ ಪಕ್ಷದ ವರಿಷ್ಠರ ಬಳಿ ಚರ್ಚಿಸಲು ಸಲಹೆ ನೀಡುತ್ತಾರೆ.

ಇದರಂತೆ ಅಮಿತ್ ಷಾ ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಜೊತೆ ಮಾತುಕತೆ ನಡೆಸಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 6 ತಿಂಗಳ ನಂತರ ಮೋದಿ ಅವರನ್ನು ಭೇಟಿಯಾದ ವೇಳೆ ಬಿಎಸ್‍ವೈ ಅವರನ್ನು ಆತ್ಮೀಯ ವಾಗಿಯೇ ಬರಮಾಡಿಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದು, ಅಮಿತ್ ಷಾ ವಿಶ್ರಾಂತಿಯಲ್ಲಿರುವುದರಿಂದ ರಾಜ್ಯದ ಬೆಳವಣಿಗೆಗಳ ಬಗ್ಗೆ ಜೆ.ಪಿ.ನಡ್ಡಾ ಜೊತೆ ಚರ್ಚಿಸಬೇಕೆಂದು ಬಿಎಸ್‍ವೈಗೆ ಕಿವಿಮಾತು ಹೇಳಿದ್ದಾರೆ.

ಇದರನ್ವಯ ಯಡಿಯೂರಪ್ಪನವರು ಸಂಜೆ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ಪಕ್ಷ ಸಂಘಟನೆ, ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವರು.

ನಿನ್ನೆ ರಾತ್ರಿಯೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಂಪುಟದಲ್ಲಿ ಆರು ಸ್ಥಾನಗಳು ಖಾಲಿಯಿವೆ. ಕೆಲವು ಸಚಿವರನ್ನು ಕೈಬಿಡುವುದಾದರೆ ಪುನಾರಚನೆ ಮಾಡಬೇಕಾಗುತ್ತದೆ.  ಪ್ರಾದೇಶಿಕ ಸಮತೋಲನ, ಜಾತಿ, ಪ್ರದೇಶವಾರು, ಹಿರಿತನ ಎಲ್ಲವನ್ನೂ ಗಮನಿಸಿ ಸಮತೋಲನದ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗಿದ್ದಾರೆ. ಹೀಗಾಗಿಯೇ ಸಂತೋಷ್ ಜೊತೆ ಅವರು ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬಗೆಹರಿಯದ ಬಿಕ್ಕಟ್ಟು: ಮೂಲಗಳ ಪ್ರಕಾರ ಯಡಿಯೂರಪ್ಪ ವರಿಷ್ಠರ ಬಳಿ ಹಾಲಿ ನಾಲ್ವರು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು 8 ಮಂದಿಗೆ ಮಂತ್ರಿ ಸ್ಥಾನ ನೀಡಲು ಒಲವು ತೋರಿದ್ದಾರೆ.  ಪಕ್ಷದ ಸಂಘಟನೆಗೆ ಕೆಲವರನ್ನು ನಿಯೋಜಿಸಿ ವಲಸೆ ಮತ್ತು ಮೂಲ ಒಳಗೊಂಡ 8 ಮಂದಿಗೆ ಸಚಿವ ಸ್ಥಾನ ನೀಡುವುದು ಸಿಎಂ ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿದೆ.

ಇಬ್ಬರು ಲಿಂಗಾಯಿತ, ಇಬ್ಬರು ಪರಿಶಿಷ್ಟ ಜಾತಿ, ಕುರುಬರು ಇಬ್ಬರು ಹಾಗೂ ಹಿಂದುಳಿದ ಸಮುದಾಯ ದಿಂದ ಮತ್ತಿಬ್ಬರು ಸೇರಿದಂತೆ ಒಟ್ಟು 8 ಮಂದಿಯನ್ನು ಜಾತಿ, ಪ್ರದೇಶವಾರು ಆಧಾರದ ಮೇಲೆ ಸಂಪುಟ ಪುನಾರಚನೆ ಮತ್ತು ವಿಸ್ತರಣೆಗೆ ಏಕಕಾಲದಲ್ಲೇ ಕೈ ಹಾಕುವ ತವಕದಲ್ಲಿದ್ದಾರೆ ಸಿಎಂ.  ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸೋಮವಾರ ಆರಂಭವಾಗಲಿರುವ ಅಧಿವೇಶನದೊಳಗೆ ಸಂಪುಟ ಬಿಕ್ಕಟ್ಟು ಇತ್ಯರ್ಥಪಡಿಸಿ ಕಲಾಪವನ್ನು ಸುಗಮವಾಗಿ ನಡೆಸುವ ಆಲೋಚನೆಯಲ್ಲಿದ್ದಾರೆ.

ಆದರೆ ಪ್ರತಿಯೊಂದಕ್ಕೂ ಲೆಕ್ಕಾಚಾರ ಹಾಕಿಯೇ ಹಸಿರು ನಿಶಾನೆ ತೋರುವ ನಾಯಕರು, ಯಡಿಯೂರಪ್ಪನವರ ಮಹತ್ವಾಕಾಂಕ್ಷೆಯ ಸಂಪುಟ ವಿಸ್ತರಣೆಗೆ ಅನುಮತಿ ಕೊಡುವರೇ ಇಲ್ಲವೇ ಮುಂದೂಡುವರೇ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.

Facebook Comments