ಸೋಮವಾರ ಸಂಪುಟ ವಿಸ್ತರಣೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 14- ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಸೋಮವಾರ ನಡೆಯುವ ಸಾಧ್ಯತೆಯಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖರ ಜೊತೆ ಮಾತುಕತೆ ನಡೆಸಿದ್ದಾರೆ.

ರೇಸ್‍ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಮತ್ತಿತರರ ಜೊತೆ ಮಾತುಕತೆ ನಡೆಸಲಾಯಿತು.
ದೆಹಲಿಯಿಂದ ವರಿಷ್ಠರ ಸಂದೇಶವನ್ನು ಹೊತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ ಸಂದರ್ಭದಲ್ಲೇ ಬೊಮ್ಮಾಯಿ ಅವರು ಪ್ರಮುಖರ ಜೊತೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮೂರ್ನಾಲ್ಕು ದಿನಗಳಲ್ಲಿ ಸಂದೇಶ ನೀಡಲಾಗುವುದು ಎಂದು ವರಿಷ್ಠರು ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಸಂದೇಶ ದೆಹಲಿ ನಾಯಕರಿಂದ ಬಾರದಿರುವುದು ಸಚಿವ ಆಕಾಂಕ್ಷಿಗಳಲ್ಲಿ ತಳಮಳ ಉಂಟು ಮಾಡಿದೆ. ಬೆಂಗಳೂರಿಗೆ ಆಗಮಿಸಿರುವ ಉಸ್ತುವಾರಿ ಅರುಣ್ ಸಿಂಗ್ ದೆಹಲಿ ನಾಯಕರಿಂದ ಶುಭ ಸುದ್ದಿಯನ್ನೇ ತಂದೇ ತರುತ್ತಾರೆ ಎಂಬ ಅಚಲವಾದ ವಿಶ್ವಾಸ ಬಿಜೆಪಿ ನಾಯಕರದ್ದು.

ಒಂದು ವೇಳೆ ಸಂಪುಟ ಪುನಾರಚನೆ/ವಿಸ್ತರಣೆಗೆ ಅನುಮತಿ ಕೊಟ್ಟರೆ ಸೋಮವಾರವೇ ನೂತನ ಸಚಿವರು ಅಧಿಕಾರ ಸ್ವೀಕರಿಸುವ ಸಂಭವವಿದೆ. ಈ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಸಿಎಂ ಬೊಮ್ಮಾಯಿ ಅವರು ಪ್ರಮುಖರ ಜೊತೆ ಗುಪ್ತ ಮಾತುಕತೆ ನಡೆಸಿದ್ದಾರೆ.

ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪ ಬಳಿ ಮಾತುಕತೆ ನಡೆಸಿದ್ದರು. ಇದಾದ ನಂತರ ಸಂಜೆ ಆರ್‍ಎಸ್‍ಎಸ್ ನಾಯಕರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಪುಟದಿಂದ ಕೈಬಿಡುವವರು ಹಾಗೂ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವವರ ಕುರಿತಾಗಿಯೂ ಬೊಮ್ಮಾಯಿ ಪ್ರಮುಖರ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಂತಿಮವಾಗಿ ಅರುಣ್ ಸಿಂಗ್ ಅವರು ದೆಹಲಿಯಿಂದ ತಂದಿರುವ ಸಂದೇಶದ ಮೇಲೆ ಈ ಎಲ್ಲ ಬೆಳವಣಿಗೆಗಳು ಮುಂದುವರೆಯಲಿವೆ.

Facebook Comments