ವಿಶ್ವ ಪರಮಾಣು ಸಂಸ್ಥೆ ಲೆಕ್ಕ ಪರಿಶೋಧಕರಾಗಿ ಭಾರತದ ಅಧಿಕಾರಿ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.25- ವಿಶ್ವದ ಪ್ರತಿಷ್ಠಿತ ಪರಮಾಣು ಸಂಸ್ಥೆ (ಐಎಇಎ)ಗೆ ಭಾರತೀಯ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧನಾ ಸಂಸ್ಥೆಯ (ಸಿಎಜಿ) ಮಹಾನಿರ್ದೇಶಕರಾದ ಮುರ್ಮು ಅವರು ಬಾಹ್ಯ ಪರಿಶೋಧಕರಾಗಿ ಆಯ್ಕೆಯಾಗಿದ್ದಾರೆ.

ಭಾರತೀಯ ವಿದೇಶಾಂಗ ಇಲಾಖೆ ಈ ವಿಷಯವನ್ನು ಹಂಚಿಕೊಂಡಿದೆ. ವಿಯೆನ್ನಾದಲ್ಲಿ ನಡೆದ ಸಮ್ಮೇಳನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2022ರಿಂದ 2027ರವರೆಗೆ ಮುರ್ಮು ಅವರು ಬಾಹ್ಯ ಲೆಕ್ಕ ಪರಿಶೋಧಕರಾಗಿ ಜವಾಬ್ದಾರಿ ನಿರ್ವಹಣೆ ಮಾಡಲಿದ್ದಾರೆ.

ವಿಶ್ವದ ನಾನಾ ದೇಶಗಳಿಂದ ಬಾಹ್ಯ ಲೆಕ್ಕ ಪರಿಶೋಧಕರಾಗಲು ಹಲವಾರು ಬಿಡ್ ಸಲ್ಲಿಕೆಯಾಗಿದ್ದವು. ತೀವ್ರ ಸ್ಪರ್ಧೆಯ ನಡುವೆ ಭಾರತದ ಅಧಿಕೃತ ಲೆಕ್ಕ ಪರಿಶೋಧನಾ ಸಂಸ್ಥೆಯ ಮಹಾ ನಿರ್ದೇಶಕರಾದ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಆಗಸ್ಟ್ 8ರಂದು ಸಿಎಜಿ ಮುಖ್ಯಸ್ಥರಾಗಿ ಮುರ್ಮು ಅಧಿಕಾರವಹಿಸಿಕೊಂಡಿದ್ದರು.

ಅದಕ್ಕೂ ಮೊದಲು ಅವರು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಆಗಿ ಕೆಲಸ ಮಾಡಿದ್ದರು. ಕೇಂದ್ರ ಸರ್ಕಾರದಲ್ಲಿ ವೆಚ್ಚಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ, ಕಂದಾಯ ಮತ್ತು ಹಣಕಾಸು ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಪರಮಾಣು ಸಂಸ್ಥೆ ತನ್ನ ಲೆಕ್ಕ ಪರಿಶೋಧಕರ ಆಯ್ಕೆ ಪ್ರಕ್ರಿಯೆಯನ್ನು ಜಾಗತಿಕ ಗುಣಮಟ್ಟಕ್ಕನುಗುಣವಾಗಿ ನಡೆಸಲಿದೆ. ಅದರಲ್ಲಿ ಭಾರತ ಸರ್ಕಾರದ ಅಧಿಕಾರಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ.

Facebook Comments