ಕೆನಡಾದಲ್ಲಿ ಗನ್‍ಮ್ಯಾನ್ ಅಟ್ಟಹಾಸಕ್ಕೆ 16 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಟೊರೊಂಟೊ, ಏ.20- ಪೊಲೀಸ್ ಅಧಿಕಾರಿ ಸೋಗಿನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 16 ಮಂದಿ ಹತರಾಗಿ, ಅನೇಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಕೆನಡಾದ ನೋವಾ ಸ್ಕಾಟಿಯಾ ಪ್ರಾಂತ್ಯದಲ್ಲಿ ನಡೆದಿದೆ.  ಈ ನರಮೇದ ನಡೆಸಿದ ಗನ್‍ಮ್ಯಾನ್‍ನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ.

ಕಳೆದ 30 ವರ್ಷಗಳಲ್ಲಿ ಕೆನಡಾದಲ್ಲಿ ನಡೆದ ಅತ್ಯಂತ ಘೋರ ಮಾರಣಹೋಮ ಇದಾಗಿದೆ. ಕೆನಡಾದ ಹಾಲಿಫ್ಯಾಕ್ಸ್ ನಗರದಿಂದ ಉತ್ತರಕ್ಕ 100 ಕಿಮೀ ದೂರದಲ್ಲಿರುವ ಪೊರ್ಟಾಪಿಕ್ ಪಟ್ಟಣದ ಅಕ್ಕಪಕ್ಕದ ಮನೆಗಳ ಮೇಲೆ ಅದೇ ಪ್ರದೇಶದ ತಾತ್ಕಾಲಿಕ ನಿವಾಸಿಯಾದ ಗೇಬ್ರಿಯಲ್ ವೋರ್ಟ್‍ಮನ್ (51) ಗನ್‍ನಿಂದ ಮನಬಂದಂತೆ ಗುಂಡು ಹಾರಿಸಿದೆ.

ಈ ಭೀಕರ ದಾಳಿಯಲ್ಲಿ ಕನಿಷ್ಠ 16 ಮಂದಿ ಹತರಾಗಿ ಅನೇಕರು ಗಾಯಗೊಂಡರೆಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೆÇಲೀಸ್ ಅಧಿಕಾರಿ ಸಮವಸ್ತ್ರದಲ್ಲಿದ್ದ ಗೇಬ್ರಿಯಲ್ ಮೊದಲು ಒಂದು ಮನೆ ಮೇಲೆ ದಾಳಿ ನಡೆಸಿ ಅಲ್ಲಿದ್ದವರನ್ನು ಕೊಂದು ನಂತರ ತನ್ನ ದಾಂಧಲೆಯನ್ನು ಮುಂದುವರಿಸಿ ಒಟ್ಟು 16 ಮಂದಿಯನ್ನು ಹತ್ಯೆ ಮಾಡಿದ್ದಾನೆ.

ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ರಕ್ಷಣಾ ಸೇವೆಯ ಕೆಲವರು ಹತರಾಗಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್(ಆರ್‍ಸಿಎಂಪಿ) ವಕ್ತಾರ ಡೇನಿಯಲ್ ಬ್ರಿಯಾನ್ ತಿಳಿಸಿದ್ದಾರೆ. ನಂತರ 12 ತಾಸುಗಳ ಕಾರ್ಯಾಚರಣೆ ಬಳಿಕೆ ಹಂತಕ ಗೇಬ್ರಿಯಲ್‍ನನ್ನು ಪೊಲೀಸರು ಗುಂಡಿಟ್ಟು ಕೊಂದರು. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಈ ಹತ್ಯಾಕಾಂಡದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಇದು ನಮ್ಮ ಪ್ರಾಂತೀಯ ಇತಿಹಾಸದಲ್ಲೇ ಅತ್ಯಂತ ಪ್ರಜ್ಞಾರಹಿತ ಹಿಂಸಾಚಾರ ಕೃತ್ಯಗಳಲ್ಲಿ ಒಂದಾಗಿದೆ ಎಂದು ನೊವಾ ಸ್ಕಾಟಿಯಾ ಪ್ರಾಂತ್ಯದ ಪ್ರಧಾನಮಂತ್ರಿ ಸ್ಟೀಫನ್ ಮ್ಯಾಕ್‍ನೀಲ್ ತಿಳಿಸಿದ್ದಾರೆ.

Facebook Comments

Sri Raghav

Admin