3 ತಿಂಗಳ ಅವಧಿಯಲ್ಲಿ ಒಂದೇ ಗ್ರಾಮದ 20ಕ್ಕೂ ಹೆಚ್ಚು ಮಂದಿ ಸಾವು..!
ಬಳ್ಳಾರಿ, ಜು.1- ಕಾರ್ಖಾನೆಗಳ ಕಲುಷಿತ ವಾತಾವರಣದಿಂದ ಕ್ಯಾನ್ಸ್ರ್ ಹಾಗೂ ಪಾಶ್ರ್ವವಾಯುನಂತಹ ಆರೋಗ್ಯ ಸಮಸ್ಯೆಗಳು ತೀವ್ರವಾಗಿದ್ದು, ಮೂರು ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಆತಂಕಕಾರಿ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ, ಬಳ್ಳಾರಿ ತಾಲ್ಲೂಕಿನ ಹರಗಿನದೋಣಿ ಗ್ರಾಮದ ಸುತ್ತಮುತ್ತ 8ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಅಲ್ಲಿಂದ ಹೊರ ಬರುತ್ತಿರುವ ಗಾಳಿ ಹಾಗೂ ನೀರು ಕಲುಷಿತವಾಗಿದ್ದು, ಜನ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.
ಗ್ರಾಮದಲ್ಲಿ ಬಹಳಷ್ಟು ಮಂದಿಗೆ ಕ್ಯಾನ್ಸರ್ ತಗುಲಿದ್ದು, ಈವರೆಗೂ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 14 ಮಂದಿಗೆ ಕ್ಯಾನ್ಸರ್ ಕಾಡುತ್ತಿದೆ. ಪಾಶ್ರ್ವವಾಯು, ಕ್ಷಯ ಸೇರಿದಂತೆ ಗಂಭೀರ ಕಾಯಿಲೆಗಳಿಗೆ 10 ಮಂದಿ ಸಿಲುಕಿದ್ದಾರೆ.
ಆರೋಗ್ಯದ ಸಮಸ್ಯೆ ಕುರಿತು ಈವರೆಗೂ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಗಮನ ಹರಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವ ನಡುವೆಯೇ ಮಾಲಿನ್ಯದಿಂದಾಗಿ ಎದುರಾಗಿರುವ ಆರೋಗ್ಯದ ಸಮಸ್ಯೆ ಗ್ರಾಮದ ಜನರನ್ನು ಕಂಗೆಡಿಸಿದೆ.