ಮರಕ್ಕೆ ಕಾರು ಡಿಕ್ಕಿ: ಇಬ್ಬರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಮೇ 5-ಅತಿವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಪರಿಣಾಮ ಗುತ್ತಿಗೆದಾರ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಹಾಸನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುತ್ತಿಗೆದಾರ ಗವೇನಹಳ್ಳಿ ಜಯರಾಂ (55) ಮತ್ತು ಮಾಜಿ ಎಂಎಲ್‍ಸಿ ಪಟೇಲ್ ಶಿವರಾಂ ಅವರ ಸೋದರಿ ಮಗ ಭರತ್(30) ಮೃತಪಟ್ಟ ದುರ್ದೈವಿಗಳು.
ಭರತ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.ರಾತ್ರಿ ಭರತ್ ಅವರು ಜಯರಾಂ ಅವರೊಂದಿಗೆ ಕಾರಿನಲ್ಲಿ ಹಾಸನದಿಂದ ಗೋಪನಹಳ್ಳಿಗೆ ಹೋಗುತ್ತಿದ್ದಾಗ ಕೋರಮಂಗಲ ಗೇಟ್ ಬಳಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಮುಂಭಾಗದಲ್ಲಿ ಕುಳಿತಿದ್ದ ಇಬ್ಬರೂ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಹಾಸನ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಇಬ್ಬರ ಮೃತದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments