14 ಕಾರುಗಳ ಗಾಜುಗಳನ್ನು ಒಡೆದ ‘ಪುಂಡ ವಿದ್ಯಾರ್ಥಿಗಳು’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ಕುಡಿದ ಮತ್ತಿನಲ್ಲಿ 14 ಕಾರಿನ ಗಾಜುಗಳನ್ನು ಒಡೆದು ಹಾಕಿದ್ದವರನ್ನು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನದ ಹಾಗೂ ಬಿಹಾರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅದ್ನಾನ್ ಶಾಹಬ್, ರೋಹಿತ್‍ಕುಮಾರ್‍ಸಿನ್ಹಾ, ಜೈಸಿ, ಡಿ.ಭಾರದ್ವಾಜ್ ಹಾಗೂ ವಯಂ ಕೋಶಿಶ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಮೂರು ದಿನಗಳ ಹಿಂದೆ ತನ್ನ ಸ್ನೇಹಿತನ ಬರ್ತ್‍ಡೇ ಪಾರ್ಟಿ ಆಚರಿಸಿದ ನಂತರ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯ ಕೃಷ್ಣ ಗಾರ್ಡನ್ ಹಾಗೂ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ನಂಜಪ್ಪ ಬ್ಲಾಕ್‍ನ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ 14 ಕಾರುಗಳ ಗಾಜುಗಳನ್ನು ತಮ್ಮ ಬಳಿ ಇದ್ದ ಬ್ಯಾಟ್‍ನಿಂದ ಪುಡಿ ಪುಡಿ ಮಾಡಿ ಪರಾರಿಯಾಗಿದ್ದರು.

ಆರೋಪಿಗಳಲ್ಲಿ ಮೂವರು ವಿದ್ಯಾರ್ಥಿಗಳು ಕೋಡಿಪಾಳ್ಯದ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸಿಸುತ್ತಿದ್ದರೆ, ಉಳಿದ ಇಬ್ಬರು ಕಾಲೇಜಿನ ಹಾಸ್ಟೆಲ್‍ನಲ್ಲಿ ತಂಗಿದ್ದರು. ಮೂರು ದಿನಗಳ ಹಿಂದೆ ಕೋಡಿಪಾಳ್ಯದ ಅಪಾರ್ಟ್‍ಮೆಂಟ್‍ನಲ್ಲಿ ತನ್ನ ಸ್ನೇಹಿತನ ಬರ್ತ್‍ಡೇ ಪಾರ್ಟಿ ಆಚರಿಸಿದ್ದರು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐವರು ವಿದ್ಯಾರ್ಥಿಗಳು ಎರಡು ಬೈಕ್‍ಗಳಲ್ಲಿ ಬಂದು ಪೆಟ್ರೋಲ್ ಬಂಕ್‍ವೊಂದರ ಕಾಫಿ ಮಳಿಗೆಯಲ್ಲಿ ಕೂಲ್ ಡ್ರಿಂಕ್ಸ್ ಖರೀದಿಸಿ ವಾಪಸಾಗುತ್ತಿದ್ದರು.

ಈ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣ ಗಾರ್ಡನ್ ರಸ್ತೆಗಳ ಬದಿ ನಿಲ್ಲಿಸಿದ್ದ ಆರು ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿ ನಂತರ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ನಂಜಪ್ಪ ಬ್ಲಾಕ್ ರಸ್ತೆ ಬದಿ ನಿಲ್ಲಿಸಿದ್ದ ಎಂಟು ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿ ಪರಾರಿಯಾಗಿದ್ದರು.

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ರಾಜರಾಜೇಶ್ವ ರಿನಗರ ಠಾಣೆ ಪೊಲೀಸರು ರಸ್ತೆಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಆಧರಿಸಿ ಐವರು ವಿದ್ಯಾರ್ಥಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂತರಿಂದ ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಲು ಬಳಸಿದ್ದ ಬ್ಯಾಟ್ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments