ಕಾರು ಕಳ್ಳನ ಬಂಧನ
ಬೆಂಗಳೂರು, ನ.16- ಕೀಯನ್ನು ಕಳ್ಳತನ ಮಾಡಿ ಕಾರು ಕಳವು ಮಾಡಿದ್ದ ಗ್ಯಾರೇಜ್ ಕೆಲಸಗಾರನನ್ನು ಉತ್ತರ ವಿಭಾಗದ ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಕಾಮರಾಜ (57) ಬಂಧಿತ ಕಾರು ಕಳ್ಳನಾಗಿದ್ದು, ಈತನಿಂದ 6.30 ಲಕ್ಷ ಬೆಲೆಯ ಟೊಯೋಟೋ ಕ್ವಾಲೀಸ್ ಕಾರು ಮತ್ತು ಅದರಲ್ಲಿದ್ದ ವೆಲ್ಡಿಂಗ್ ಸಾಮಗ್ರಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಶೇಷಾದ್ರಿಪುರದ ಕೃಷ್ಣ ಫೋರ್ಮಿಲ್, ಪ್ಲಾಟ್ ಫಾರಂ ರಸ್ತೆಯಲ್ಲಿರುವ ದೇವ ಎಂಬುವರು ತಮ್ಮ ಮನೆ ಮುಂದೆ ನ.6ರಂದು ರಾತ್ರಿ ಕಾರು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ಕಾರು ಕಳ್ಳತನವಾಗಿತ್ತು. ಈ ಬಗ್ಗೆ ಶ್ರೀರಾಮಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಶೇಷಾದ್ರಿಪುರದ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕಾರನ್ನು ರಿಪೇರಿ ಮಾಡುವ ಸಲುವಾಗಿ ದೇವ ಅವರ ಮನೆಗೆ ಹೋಗಿದ್ದಾಗ ಎಲ್ಲರ ಕಣ್ತಪ್ಪಿಸಿ ಕಾರಿನ ಕೀ ಕಳವು ಮಾಡಿಕೊಂಡು ಹೋಗಿ ಕೆಲ ದಿನಗಳ ನಂತರ ಕಾರನ್ನು ಕಳ್ಳತನ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಶ್ರೀರಾಮಪುರ ಠಾಣೆ ಇನ್ಸ್ಪೆಕ್ಟರ್ ಸುನಿಲ್ ವೈ.ನಾಯಕ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.