ಕಾರು-ಟ್ರಕ್ ಡಿಕ್ಕಿ : ಐವರ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

ಚಂಡೀಗಢ, ನ.17-ಪಂಜಾಬ್‍ನ ಸಂಗ್ರೂರ್-ಸುನಂ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಐವರು ಸಜೀವ ದಹನಗೊಂಡ ಭೀಕರ ಘಟನೆ ಸಂಭವಿಸಿದೆ.  ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ವೈದ್ಯರೊಬ್ಬರೂ ಸೇರಿದಂತೆ ಐವರು ಸುಟ್ಟು ಕರಕಲಾಗಿದ್ದಾರೆ ಎಂದು ಸಂಗ್ರೂರು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ವಿವೇಕಶೀಲ ಸೋನಿ ತಿಳಿಸಿದ್ದಾರೆ.

ಸಂಗ್ರೂರಿನಲ್ಲಿ ನಿನ್ನೆ ರಾತ್ರಿ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ ಐವರು ಮೋಗಾ ಪ್ರದೇಶಕ್ಕೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಟ್ರಕ್‍ನ ಡೀಸೆಲ್ ಟ್ಯಾಂಕ್‍ಗೆ ಕಾರು ಅಪ್ಪಳಿಸಿ ಇಂದನ ಸೋರಿ ಬೆಂಕಿ ಹೊತ್ತಿಕೊಂಡು ಸ್ಪೋಟಗೊಂಡಿತು ಎಂದು ಎಸ್‍ಎಸ್‍ಪಿ ತಿಳಿಸಿದ್ದಾರೆ.

ಟ್ರಕ್ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ಮುಂದುವರಿದಿದೆ. ಎರಡು ದಿನಗಳ ಹಿಂದೆ ಪಂಜಾಬ್‍ನ ಹೋಷಿಯಾರ್‍ಪುರ್ ಜಿಲ್ಲೆಯಲ್ಲಿ ಪಗ್ವಾಡಾ ಬೈಪಾಕ್ ಚೌಕದ ಬಳಿ ಕಾರೊಂದು ಮರಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ವಕೀಲರು ಸುಟ್ಟು ಕರಕಲಾದ ಘಟನೆಯನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments