ನಾಳೆಯಿಂದ ‘ನಮ್ಮ ಕಾರ್ಗೋ’ ಸೇವೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.25- ಸಾರಿಗೆ ಇಲಾಖೆಯ ಆದಾಯವನ್ನು ಹೆಚ್ಚಿಸಿ, ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಮ್ಮ ಕಾರ್ಗೊ ಯೋಜನೆಯನ್ನು ಜಾರಿ ಗೊಳಿಸುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರಿಯರ್‍ಅನ್ನು ಖಾಸಗಿಯವರು ನಿರ್ವಹಿಸುತ್ತಿದ್ದಾರೆ. ಬಿಎಂಟಿಸಿ ಹೊರತುಪಡಿಸಿ ಎಲ್ಲ ಕೆಎಸ್‍ಆರ್‍ಟಿಸಿ ಸಂಸ್ಥೆಗಳಿಂದ ಪಾರ್ಸಲ್ ವ್ಯವಸ್ಥೆಯನ್ನು ನಾಳೆಯಿಂದ ಹೊಸದಾಗಿ ಪ್ರಾರಂಭಿಸುತ್ತಿದ್ದೇವೆ. ಮೊದಲ ಹಂತವಾಗಿ 109 ಸ್ಥಳಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಸಚಿವರು ಹೇಳಿದರು.

ಅಂತಾರಾಜ್ಯಕ್ಕೂ ಪಾರ್ಸಲ್ ತಲುಪಿಸುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಈ ನೂತನ ವ್ಯವಸ್ಥೆಯನ್ನು ನಾಳೆ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಈ ಹೊಸ ವ್ಯವಸ್ಥೆಯಿಂದ ಸಾರಿಗೆ ನಿಗಮಕ್ಕೆ 80 ರಿಂದ 100 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ನಷ್ಟ ಸರಿದೂಗಿಸಲು ಈ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಹಳ್ಳಿಯಿಂದ ಜಿಲ್ಲೆಗಳಿಗೆ ಈ ಸೇವೆ ಇರಲಿದೆ. ರಸ್ತೆ ಸಾರಿಗೆ, ಬಸ್‍ಗಳು ಎಲ್ಲೆಲ್ಲಿ ಓಡುತ್ತವೋ ಅಲ್ಲೆಲ್ಲ ನಮ್ಮ ಕಾರ್ಗೊ ಯೋಜನೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು. ಕೊರೊನಾದಿಂದ 2780 ಕೋಟಿಯಷ್ಟು ನಷ್ಟವಾಗಿದೆ. ಡಿಸೆಂಬರ್‍ವರೆಗೆ ಇಂಧನ ಮತ್ತು ಆದಾಯದ ಕೊರತೆ ಉಂಟಾಗಿದ್ದು, 1780 ಕೋಟಿ ಸರ್ಕಾರದಿಂದ ಹಣ ಪಡೆದುಕೊಂಡು 1.60 ಲಕ್ಷ ಸಿಬ್ಬಂದಿಗೆ ಸಂಬಳ ಕೊಟ್ಟಿದ್ದೇವೆ. ಇಲ್ಲಿಯವರೆಗೆ ಸಂಬಳ ನಿಲ್ಲಿಸಿಲ್ಲ ಎಂದು ಸಚಿವರು ಹೇಳಿದರು.

ಕೋವಿಡ್‍ಗೂ ಮೊದಲು 1508 ಕೋಟಿ ನಷ್ಟವಿತ್ತು. ಕೋವಿಡ್ ನಂತರ ನಷ್ಟದ ಪ್ರಮಾಣ 2780 ಕೋಟಿಗೆ ಏರಿದೆ. ವಿದ್ಯಾರ್ಥಿ ಪಾಸ್ ಹಣ 2720 ಕೋಟಿ ಸರ್ಕಾರದಿಂದ ಬರಬೇಕಾಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿ ಪಾಸ್ ದರದಲ್ಲಿ ಹೆಚ್ಚಳ ಮಾಡಿಲ್ಲ: 12 ಪರ್ಸೆಂಟ್ ಸರಾಸರಿ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪಾಸ್ ದರದಲ್ಲಿ ಹೆಚ್ಚಳ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ ದೃಷ್ಟಿಯಿಂದ ನಷ್ಟವಾಗಿದ್ದರೂ ನಡೆಸುತ್ತಿದ್ದೇವೆ. ಸೇವಾ ಸಿಂಧು ಯೋಜನೆಯಡಿ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದರು.

ನಿಗಮದ ನೌಕರರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಆರು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆರೋಗ್ಯ ಭಾಗ್ಯ ಯೋಜನೆ ಕಲ್ಪಿಸಲಾಗಿದೆ. ಕರ್ತವ್ಯದ ವೇಳೆ ಮೃತಪಟ್ಟ ಕೋವಿಡ್ ವಾರಿಯರ್ಸ್‍ಗೆ 30 ಲಕ್ಷ ಪರಿಹಾರ ನೀಡುತ್ತೇವೆ. 112 ನೌಕರರು ಮೃತಪಟ್ಟಿದ್ದು, 15 ದಿನಗಳೊಳಗೆ ಹಣ ಬಿಡುಗಡೆ ಮಾಡಲಾಗುವುದು.

ಹಿರಿಯ ಅಧಿಕಾರಿಗಳಿಂದ ಕಿರುಕುಳ ತಪ್ಪಿಸಲು ಸಮಿತಿ ರಚನೆ ಮಾಡಲು ಮುಂದಾಗಿದ್ದೇವೆ. ಆರನೆ ವೇತನದ ಬಗ್ಗೆ ಸಭೆಗಳಾಗಿದ್ದು, ಅದನ್ನೂ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಂತರ್‍ನಿಗಮ ವರ್ಗಾವಣೆ ಬಗ್ಗೆ ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು. ಕೋಡಿಹಳ್ಳಿ ಚಂದ್ರಶೇಖರ್‍ಗೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಸಿಬ್ಬಂದಿ ಯಾವುದೇ ಬೇಡಿಕೆ ಇದ್ದರೂ ನಮ್ಮ ಬಳಿ ಹೇಳಬೇಕು. ರೈತ ಸಂಘಟನೆಗಳಿಗೂ ನಮಗೂ ಸಂಬಂಧವಿಲ್ಲ ಎಂದು ಸವದಿ ತಿಳಿಸಿದರು.

Facebook Comments