ಕೊರೋನಾಗೆ ಬೆಚ್ಬಿಬಿದ್ದ ಕರುನಾಡು : ಬಹುತೇಕ ನಗರಗಳು ಖಾಲಿಖಾಲಿ, ಮನೆಸೇರಿದ ಜನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.19- ವಿಶ್ವವನ್ನೇ ಅಲ್ಲೋಲಕಲ್ಲೋಲ ಮಾಡಿರುವ ಮಹಾಮಾರಿ ಕೊರೋನಾ ವೈರಸ್ ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದು, ಸ್ವಯಂಪ್ರೇರಿತ ಗೃಹಬಂಧನಕ್ಕೆ ಒಳಗಾಗಿದ್ದಾರೆ.  ಗಾಳಿ, ಉಸಿರಾಟ, ಸ್ಪರ್ಶ ಸೇರಿದಂತೆ ಇನ್ನಿತರ ಮೂಲಕ ಕೊರೋನಾ ವೈರಸ್ ಸೋಂಕು ತಗುಲಬಹುದೆಂಬ ಭೀತಿಯಿಂದಾಗಿ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಬಹುತೇಕರು ಹಾಲುಹಣ್ಣು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಮನೆ ಸೇರಿದರೆ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರು, ಕಲಬುರಗಿ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕೊರೋನಾ ವೈರಸ್‍ಗೆ ಕರುನಾಡು ಬೆಚ್ಚಿಬಿದ್ದಿದೆ.

ಬೆಂಗಳೂರಿನ ಬಹುತೇಕ ಜನನಿಬಿಡ ಪ್ರದೇಶಗಳು ಖಾಲಿಖಾಲಿಯಾಗಿ ಬಿಕೋ ಎನ್ನುತ್ತಿವೆ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಅವೆನ್ಯೂ ರಸ್ತೆ, ಶಿವಾಜಿನಗರ, ವಿಮಾನ ನಿಲ್ದಾಣ ರಸ್ತೆ, ಹೊರವರ್ತುಲ ರಸ್ತೆಗಳು, ಮಾಲ್‍ಗಳು, ಐಟಿಬಿಟಿ ಕಂಪನಿಗಳು, ಹೈಕೋರ್ಟ್, ಉದ್ಯೋಗಸೌಧ, ವಿಕಾಸಸೌಧ, ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಜನರ ಸುಳಿವೇ ಇಲ್ಲ.

ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಬಹುತೇಕ ಎಲ್ಲ ಕಡೆ ಇದೇ ಪರಿಸ್ಥಿತಿ ಇದೆ. ಸೋಂಕಿತ ವ್ಯಕ್ತಿಯಿಂದ ಗಾಳಿಯಿಂದಲೂ ವೈರಸ್ ಹಬ್ಬಬಹುದೆಂಬ ಭಯದಿಂದಾಗಿ ಜನರು ಮನೆ ಬಿಟ್ಟು ಹೊರಬರುತ್ತಿಲ್ಲ.  ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವವರ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಆಟೋ, ಟ್ಯಾಕ್ಸಿಗಳು, ಊಬರ್, ಓಲಾ, ಗೂಡ್ಸ್ ವಾಹನಗಳು ಕೂಡ ಕೆಲಸವಿಲ್ಲದೆ ಖಾಲಿ ಹೊಡೆಯುತ್ತಿವೆ. ಬಹುತೇಕ ಜನರು ತರಕಾರಿ, ಹಣ್ಣುಹಂಪಲುಗಳನ್ನೂ ಕೊಂಡು ತಿನ್ನಲು ಹಿಂದೆಮುಂದೆ ನೋಡುತ್ತಿದ್ದಾರೆ. ಮೂಲಭೂತ ಅಗತ್ಯಗಳನ್ನು ಕೊಂಡುಕೊಳ್ಳಲೂ ಬಹುತೇಕರು ಹಿಂಜರಿಯುತ್ತಿದ್ದಾರೆ.

ಪ್ರಾರ್ಥನಮಂದಿರಗಳು ಬಂದ್: ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಪ್ರಮುಖ ಧಾರ್ಮಿಕ ಕೇಂದ್ರಗಳಾದ ಆದಿಚುಂಚನಗಿರಿ, ಸಿದ್ದಗಂಗಾ ಮಠ, ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ಮಂತ್ರಾಲಯದ ಶ್ರೀ ರಾಘವೇಂದ್ರ ಮಠ, ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ಬಹುತೇಕ ದೇವಾಲಯಗಳು, ಮಠಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಭಕ್ತರಿಗೆ ಆಗಮಿಸದಂತೆ ಮನವಿ ಮಾಡಲಾಗಿದೆ.

ಇದೇ ಚರ್ಚ್‍ಗಳನ್ನು ಸಹ ಬಂದ್ ಮಾಡಲಾಗಿದ್ದು, ಪ್ರಾರ್ಥನೆ, ಭಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ನಾಳೆ ಮಸೀದಿಗಳಲ್ಲಿ ಕೇವಲ 15 ನಿಮಿಷ ಮಾತ್ರ ನಮಾಜ್‍ಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಜನರು ಸೇರಬಾರದೆಂದು ಧಾರ್ಮಿಕ ಮುಖಂಡರು ಮನವಿ ಮಾಡಿದ್ದಾರೆ. ಹೀಗೆ ಏಕಾಏಕಿ ಮಹಾಮಾರಿ ಕೊರೋನಾ ವೈರಸ್ ಹೊಡೆತಕ್ಕೆ ಕರುನಾಡು ಅಕ್ಷರಶಃ ಸ್ತಬ್ದಗೊಂಡಿದೆ.

Facebook Comments