ಸಣ್ಣ ಕೈಗಾರಿಕೆಗಳಿಗೆ 5 ಕೋಟಿವರೆಗೆ ಸಹಾಯಧನ ನೀಡುವಂತೆ ಸರ್ಕಾರಕ್ಕೆ ಕಾಸಿಯಾ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

kasaeಮೈಸೂರು, ನ.27- ಹಣಕಾಸು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಣ್ಣ ಕೈಗಾರಿಕೆಗಳಿಗೆ ನೆರವಾಗಲು 5 ಕೋಟಿ ರೂ.ಗಳ ಮೊತ್ತದವರೆಗೆ ರಿಯಾಯಿತಿ ದರದಲ್ಲಿ ತ್ವರಿತ ಸಹಾಯ ಧನ ನೀಡಬೇಕೆಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸರ್ಕಾರವನ್ನು ಆಗ್ರಹಿಸಿದೆ.  ಪ್ರಾಥಮಿಕ ಹಂತದಲ್ಲೇ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು ಅವನತಿ ಹೊಂದುವುದನ್ನು ತಪ್ಪಿಸಬೇಕು ಆ ಮೂಲಕ ಅವುಗಳ  ಅಸ್ತಿತ್ವ ಮತ್ತು ಸುಸ್ಥಿರ ಮುಂದುವರಿಕೆಗೆ ನೆರವಾಗ ಬೇಕು.

ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕಾ ವಲಯಕ್ಕೆ ಶೇ.4ರಷ್ಟು ಸಾಲ ವಿಸ್ತರಣೆ ಮಾಡುವುದು ತೀರಾ ಅಗತ್ಯವಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.  ಶೇ.5ರಷ್ಟು ಜಿಎಸ್‍ಟಿ ಅಡಿ ಜಾಬ್ ವರ್ಕ್ ಗಳನ್ನು ತರುವ ಮೂಲಕ ಅಥವಾ ಜಿಎಸ್‍ಟಿ ಪಾವತಿಯಿಂದ ಅವುಗಳಿಗೆ ಸಂಪೂರ್ಣ ವಿನಾ ಯಿತಿ ನೀಡಬೇಕೆಂದು ಮನವಿ ಮಾಡಿದರು. ಸುಲಭ ವಾಣಿಜ್ಯ ವ್ಯವಹಾರ ನಡೆಸುವಿಕೆ  ಸುಧಾರಣೆಗಾಗಿ ಮಂದಗತಿಯ ಹೂಡಿಕೆ ವಾತಾವರಣದ ಬದಲಾವಣೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಏಕ ಗವಾಕ್ಷಿ ಸಂಸ್ಥೆ (ಎಸ್‍ಡಬ್ಲ್ಯುಎ) ಯಲ್ಲಿನ ಲೋಪ- ದೋಷ ಮತ್ತು ನ್ಯೂನತೆಗಳನ್ನು ಸರಿಪಡಿಸಿ ಅದರ ಕಾರ್ಯನಿರ್ವಹಣೆಯನ್ನು ಚುರುಕು ಗೊಳಿಸಬೇಕು. ಬಂಡವಾಳ ಹೂಡಿಕೆ ದಾರರ ನಿರೀಕ್ಷೆಗಳನ್ನು ಈಡೇರಿಸಲು ವ್ಯವಸ್ಥೆಯಲ್ಲಿ ಬದಲಾವಣೆ ಯಾಗಬೇಕಿದೆ ಎಂದು ಬಸವರಾಜ್ ಜವಳಿ ಸಲಹೆ ನೀಡಿದರು. ಕೆಎಸ್‍ಎಸ್‍ಐಡಿಸಿ ಮತ್ತು ಕೆಐಎಡಿಬಿ ಇವುಗಳಿಂದ ಅಭಿವೃದ್ದಿಪಡಿಸಲಾದ ಕೈಗಾರಿಕಾ ನಿವೇಶನಗಳು ಸೂಕ್ತ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುತ್ತವೆ. ಸೂಕ್ತ ಮೂಲ ಸೌಕರ್ಯಗಳೊಂದಿಗೆ ಕೈಗಾರಿಕಾ ಎಸ್ಟೇಟ್‍ಗಳು ಮತ್ತು ಪ್ರದೇಶಗಳನ್ನು ಉನ್ನತೀಕರಣ, ಮೇಲ್ದರ್ಜೆಗೇರಿಸಬೇಕೆಂದು ಅವರು ಕೋರಿದರು.

ಕಾರ್ಮಿಕ ಕಾನೂನುಗಳ ಸುಧಾರಣೆಗೆ ಸಲಹೆ ಮಾಡಿದ ಜವಳಿ, ಎಸ್‍ಎಂಇಗಳಿಗಾಗಿ ಪ್ರತೇಕ ಕನಿಷ್ಠ ವೇತನ ವಿನ್ಯಾಸ ರೂಪಿಸಬೇಕು. ಎಸ್‍ಎಂಇಗಳು ಸಮಾಜದ ಸೌಲಭ್ಯ ವಂಚಿತ ವರ್ಗಗಳ ಕೌಶಲ್ಯರಹಿತ ಮತ್ತು ಅರೆ ನುರಿತ ಕಾರ್ಮಿಕರಿಗೆ ತರಬೇತಿ ಒದಗಿಸುತ್ತದೆ. ಆದ್ದರಿಂದ ಇಂಥ ಕಾರ್ಮಿಕರಿಗೆ ಮೊದಲ ವರ್ಷದಲ್ಲಿ ಕನಿಷ್ಠ ವೇತನದ ಶೇಕಡ 25ರಷ್ಟನ್ನು ಎಂಎಂಇಗಳಿಗೆ ಸಬ್ಸಿಡಿ ರೂಪದಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.

ನ.29ರಂದು ಕಾರ್ಯಕ್ರಮ: ನಗರದಲ್ಲಿ ಕಾಸಿಯಾ ವತಿಯಿಂದ ಇದೇ 29ರಂದು ಬೆಳಗ್ಗೆ 10.30ಕ್ಕೆ ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಕೈಗಾರಿಕಾ ನೀತಿ 2014-2019 ಹಾಗೂ ವ್ಯವಹಾರ ಚಟುವಟಿಕೆಗಳಿಗೆ ಸರಳೀಕೃತ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ಬಸವರಾಜ ಎಸ್.ಜವಳಿ ತಿಳಿಸಿದರು.  ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಆಗಮಿಸಲಿದ್ದಾರೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಎದುರಾಗುವ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

Facebook Comments