ಎಚ್.ಡಿ.ಕೋಟೆಯ ಕಾವೇರಿ ಗ್ರಾಮೀಣ ಬ್ಯಾಂಕ್‍ಗೆ ಕನ್ನ, 12 ಕೆಜಿ ಚಿನ್ನ ಲೂಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru--01

ಮೈಸೂರು, ಸೆ.4- ಎಚ್.ಡಿ.ಕೋಟೆಯ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಕಿಟಕಿಯ ಸರಳುಗಳನ್ನು ಗ್ಯಾಸ್ ಕಟರ್ ಮೂಲಕ ಕತ್ತರಿಸಿ ಒಳನುಗ್ಗಿರುವ ಕಳ್ಳರು ನಗದು ಸೇರಿದಂತೆ ಸುಮಾರು 3.8 ಕೋಟಿ ರೂ. ಮೌಲ್ಯದ 12 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಮೈಸೂರಿನ ಎಚ್.ಡಿ. ಕೋಟೆ ತಾಲೂಕು ಆಲನಹಳ್ಳಿ ಗೇಟ್ ಸಮೀಪದ ಕ್ಯಾತನಹಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಗೆ ಕಳೆದ ಶನಿವಾರ ಕನ್ನ ಹಾಕಲು ಇಬ್ಬರು ಮುಸುಕುಧಾರಿಗಳು ಬಂದು ಕಿಟಕಿಯ ಸರಳುಗಳನ್ನು ಗ್ಯಾಸ್ ಕಟರ್ ಮೂಲಕ ಕತ್ತರಿಸಿ ಒಳನುಗ್ಗಿ ಲಾಕರ್‍ಗಳನ್ನು ಒಡೆದು 6 ಲಕ್ಷ ನಗದು ಹಾಗೂ ಸುಮಾರು 12 ಕೆ.ಜಿ.ಚಿನ್ನಾಭರಣ ಕದ್ದೊಯ್ದಿದ್ದಾರೆ.

ಬ್ಯಾಂಕಿನಲ್ಲಿ ಅಳವಡಿಸಲಾಗಿದ್ದ ಅಲರಾಂ ಮತ್ತು ಸಿಸಿಟಿವಿಯ ತಂತಿಗಳನ್ನು ಕತ್ತರಿಸಿ ವಿದ್ಯುತ್ ಕಡಿತಗೊಳಿಸಿದ ಕಳ್ಳರು, ಬ್ಯಾಂಕಿನ ತಿಜೋರಿಯನ್ನು ಗ್ಯಾಸ್ ಕಟರ್ ಬಳಸಿ ಮುರಿದು ಅದರಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾರೆ.   ಭಾನುವಾರ ಬ್ಯಾಂಕ್‍ಗೆ ರಜೆ ಇದ್ದುದರಿಂದ ಇತ್ತ ಯಾರೂ ಸುಳಿದಿಲ್ಲ. ನಿನ್ನೆ ಬೆಳಗ್ಗೆ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ವರ್ಗ ಬ್ಯಾಂಕ್‍ಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆ ಸಿಬ್ಬಂದಿ ದಂಗಾಗಿ ತಮ್ಮ ಬ್ಯಾಂಕ್‍ನಲ್ಲಿ ಕಳ್ಳತನವಾಗಿರುವುದು ಕಂಡು ಆತಂಕದಿಂದಲೇ ಒಳಗೆ ಹೋಗಿ ನೋಡಿದಾಗ ಲಾಕರ್‍ಗಳು ಒಡೆದಿರುವುದು ಕಂಡು ಬಂದಿದೆ.

ತಕ್ಷಣ ಎಚ್.ಡಿ.ಕೋಟೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್‍ಸಿಂಗ್, ಡಿವೈಎಸ್ಪಿ ಭಾಸ್ಕರ್‍ರೈ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇಲ್ಲಿನ ಒಂದು ಸಿಸಿ ಟಿವಿಯಲ್ಲಿ ಇಬ್ಬರು ಮುಸುಕುಧಾರಿಗಳು ಒಳನುಗ್ಗಿರುವುದು ಸೆರೆಯಾಗಿದೆ.

Bank--01

ಬ್ಯಾಂಕಿನ ಹಿರಿಯ ಅಧಿಕಾರಿಗಳಿಂದ ಹೇಳಿಕೆ ಪಡೆದುಕೊಂಡಿರುವ ಪೊಲೀಸರು, ಬ್ಯಾಂಕ್‍ನ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಬ್ಯಾಂಕಿನ ಸಿಸಿಟಿವಿಯ ಡಿವಿಆರ್ ಪಡೆದುಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ. ಕಗ್ಗತ್ತಲಿನ ಸಮಯದಲ್ಲಿ ಒಳನುಗ್ಗಿರುವ ಕಳ್ಳರು ಚಿನ್ನಾಭರಣ ದೋಚಿಕೊಂಡು ಹೋಗುವ ಭರದಲ್ಲಿ ಸುಮಾರು ಒಂದು ಕೆಜಿಗೂ ಹೆಚ್ಚು ಚಿನ್ನಾಭರಣವನ್ನು ಲಾಕರ್ ಬಳಿ ಬೀಳಿಸಿಕೊಂಡು ಹೋಗಿದ್ದಾರೆ.

ಖದೀಮರು ಗ್ರಾಹಕರ ಸೋಗಿನಲ್ಲಿ ವ್ಯವಹಾರ ನಡೆಯುವ ವೇಳೆ ಬಂದು ಅಲ್ಲಿನ ವ್ಯವಸ್ಥೆಯನ್ನು ಗಮನಿಸಿ ಹಾಗೂ ಅಕ್ಕಪಕ್ಕದ ಮನೆಯವರ ಚಲನವಲನ ಆಲಿಸಿ ನಂತರ ಕಳ್ಳತನ ನಡೆಸಿರುವ ಸಾಧ್ಯತೆ ಇದೆ. ಬ್ಯಾಂಕಿನ ಬಗ್ಗೆ ಸಮಗ್ರ ಮಾಹಿತಿ ಇರುವವರೇ ಈ ಕೃತ್ಯವೆಸಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.

ಗ್ರಾಮೀಣ ಪ್ರದೇಶವಾಗಿರುವ ಕಾರಣ ಈ ಭಾಗದ ಯಾವುದೇ ರಸ್ತೆಯಲ್ಲಾಗಲಿ ಸಿಸಿ ಟಿವಿ ಅಳವಡಿಸಿಲ್ಲ. ಪ್ರಮುಖವಾಗಿ ಬ್ಯಾಂಕ್‍ಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸದಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಇನ್ನಾದರೂ ಗ್ರಾಮೀಣ ಭಾಗದಲ್ಲಿರುವ ಬ್ಯಾಂಕ್‍ಗಳನ್ನು ನಿರ್ಲಕ್ಷಿಸದೆ ಸೂಕ್ತ ಭದ್ರತೆ ಒದಗಿಸಬೇಕೆಂದು ಗ್ರಾಹಕರು ಮನವಿ ಮಾಡಿದ್ದಾರೆ.

Facebook Comments

Sri Raghav

Admin