ಪ್ರವಾಹ ಮುನ್ನೆಚ್ಚರಿಕೆ, ಕಾವೇರಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ..!

ಈ ಸುದ್ದಿಯನ್ನು ಶೇರ್ ಮಾಡಿ

Cauvery-Dam-Kabini

ಮಂಡ್ಯ, ಜು. 13:- ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರುತ್ತಿದ್ದು, ಜಲಾಶಯದಿಂದ ಹೆಚ್ಚುವರಿ ನೀರಿನ್ನು ಕಾವೇರಿ ನದಿಗೆ ಬಿಡಲಾಗುವುದು. ಆದ್ದರಿಂದ ಕಾವೇರಿ ನದಿಯ ಎರಡೂ ದಂಡೆಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಬಿನಿ, ಕೆಆರ್‌ಎಸ್ ಜಲಾಶಯಗಳು ಭರ್ತಿ
ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಕ್ಕೆ ನೀರು ತುಂಬುತ್ತಿದ್ದು, ರೈತರಿಗೆ ಸಂತಸ ಉಂಟು ಮಾಡಿದೆ. ಕೃಷ್ಣರಾಜ ಜಲಾಶಯ ತುಂಬಲು ಕೇವಲ 4 ಅಡಿ ಮಾತ್ರ ಬಾಕಿ ಇದೆ. ಕೆಆರ್‍ಎಸ್‍ನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಇಂದಿನ ಮಟ್ಟ 120.20 ಅಡಿಗಳು. ಒಳಹರಿವು 39,737 ಕ್ಯೂಸೆಕ್ ಹೊರಹರಿವು 3,766 ಕ್ಯೂಸೆಕ್ ಆಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರ್‍ಎಸ್‍ನಲ್ಲಿ 78.65 ಅಡಿಗಳಷ್ಟು ನೀರು ಇತ್ತು. ಒಳಹರಿವು 1465 ಕ್ಯೂಸೆಕ್ ಹೊರಹರಿವು 2132 ಕ್ಯೂಸೆಕ್‍ಗಳಾಗಿತ್ತು. ಆಗಿಯೇ ಕಬಿನಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 2,281.82 ಅಡಿಗಳು. ಕಬಿನಿ ಜಲಾಶಯವು ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ 45,455 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಹೊರಹರಿವು 46,250 ಕ್ಯೂಸೆಕ್ ಕಪಿಲ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳೆದ ವರ್ಷ ಕಬಿನಿ ಜಲಾಶಯದಲ್ಲಿ 2264 ಅಡಿಗಳಷ್ಟು ನೀರಿತ್ತು. ಒಳಹರಿವು 3067 ನೀರು ಇದೆ.
ಹೊರಹರಿವು 2000 ಕ್ಯೂಸೆಕ್ ಇತ್ತು.

ಹೇಮಾವತಿ ಜಲಾಶಯ ನೀರಿನ ಮಟ್ಟ ಹೆಚ್ಚಳ:
ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಯಾವುದೇ ಸಂದರ್ಭದಲ್ಲಾದರೂ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗ ದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಗೊರೂರು ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳು (37.103 ಟಿಎಂಸಿ) ಇಂದಿನ ನೀರಿನ ಮಟ್ಟ 2,917.41 ಅಡಿ (32.79 ಟಿಎಂಸಿ) ಜಲಾಶಯದ ಒಳ ಹರಿವು 26,477 ಕ್ಯೂಸೆಕ್ಸ್. ಜಲಾಶಯದ ಹೊರ ಹರಿವು 3,220 ಕ್ಯೂಸೆಕ್ ಈ ರೀತಿ ಇದ್ದು ಇದೇ ರೀತಿ ಮಳೆ ಮುಂದುವರೆದರೆ ಜಲಾಶಯ ಇನ್ನೊಂದು ದಿನದಲ್ಲಿ ಸಂಪೂರ್ಣವಾಗಿ ಭರ್ತಿಯಾಗಲಿದೆ. ಹಾಗಾಗಿ ಯಾವುದೇ ಕ್ಷಣದಲ್ಲಾದರೂ ನೀರನ್ನು ಹೊರ ಬಿಡುವ ಸಾಧ್ಯತೆ ಇದ್ದು , ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Facebook Comments

Sri Raghav

Admin