ಕಾವೇರಿ ತೀರ್ಥೋದ್ಭವ, ಭಕ್ತರು ಹರ್ಷೋದ್ಘಾರ

ಈ ಸುದ್ದಿಯನ್ನು ಶೇರ್ ಮಾಡಿ

ಮಡಿಕೇರಿ,ಅ.17- ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ಮಧ್ಯಾಹ್ನ ಕಾವೇರಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿದ್ದು ಜನ ಶ್ರದ್ಧಾ, ಭಕ್ತಿಯಿಂದ ದರ್ಶನ ಪಡೆದು ಕಣ್ತುಂಬಿಕೊಂಡರು. ಜೀವ ನದಿಯನ್ನ ಕಣ್ತುಂಬಿ ಕೊಳ್ಳಲು ಸಹಸ್ರಾರು ಮಂದಿ ಬೆಳಗಿನಿಂದಲೇ ಕಾತುರದಿಂದ ಕಾಯುತ್ತಿದ್ದರು. ಕಾವೇರಿ ಕೇವಲ ನದಿಯಲ್ಲ. ಕೋಟ್ಯಾಂತರ ಮಂದಿಯ ಜೀವನದಿ. ದೈವೀ ಸ್ವರೂಪಿಣಿ.

ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇಂದು ಬೆಳಗ್ಗಿನಿಂದಲೇ ಸಂಬ್ರಮ ಮನೆಮಾಡಿತ್ತು. ಬ್ರಹ್ಮ ಕುಂಡಿಕೆಯಲ್ಲಿ ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ತೀರ್ಥ ರೂಪಿಣಿಯಾಗಿ ದರ್ಶನ ನೀಡಿದಳು. ಕಾವೇರಿ ತೀರ್ಥೋದ್ಭವಾದಾಗ ಭಕ್ತರು ಹರ್ಷೋದ್ಘಾರ ಮಾಡಿ ಪವಿತ್ರ ಜಲವನ್ನು ಪ್ರೋಕ್ಷಿಸಿಕೊಂಡರು.

ಅಗಸ್ತ್ಯ ಮುನಿಯ ಪತ್ನಿಯಾಗಿದ್ದ ಕಾವೇರಿ ಲೋಕ ಕಲ್ಯಾಣಕ್ಕಾಗಿ ನದಿಯಾಗಿ ಹರಿಯುತ್ತಿದ್ದಾಳೆ ಎಂಬ ಪ್ರತೀತಿ ಇದ್ದು, ಬೆಳಗ್ಗೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜೆ ನೇರವೇರಿಸಲಾಗಿತ್ತು. ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥ ಹಂಚಲು ವ್ಯವಸ್ಥೆ ಮಾಡಲಾಗಿದ್ದು, ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ದೇವಸ್ಥಾನದ ಆವರಣದಲ್ಲಿ ಬ್ಯಾರಿಕೇಡï, ಸಿಸಿ ಕ್ಯಾಮರಾ ಅಳವಡಿಸಿ ವ್ಯವಸ್ಥೆ ಮಾಡಲಾಗಿತ್ತು.

ತೀರ್ಥೋದ್ಭವ ಕಣ್ತುಂಬಿಕೊಳ್ಳುವ ಅವಕಾಶ : ಕೊರೊನಾ ಕಾರಣಕ್ಕೆ ಕಳೆದ ವರ್ಷ ಈ ಪವಿತ್ರ ತೀರ್ಥೋದ್ಭವದ ಜಾತ್ರೆ ಸರಳವಾಗಿ ಆಚರಣೆಗೊಂಡಿತ್ತು. ಹೀಗಾಗಿ ಬೇಸರಗೊಂಡಿದ್ದ ಭಕ್ತರಿಗೆ, ಈ ಬಾರಿ ತೀರ್ಥೋದ್ಭವ ಕಣ್ತುಂಬಿಕೊಳ್ಳುವ ಅವಕಾಶ ಮಾತ್ರ ಸಿಕ್ಕಿದೆ. ಆದರೆ, ಕಲ್ಯಾಣಿಗೆ ಇಳಿದು ಪುಣ್ಯ ಸ್ನಾನ ಮಾಡಲು ಅವಕಾಶವಿಲ್ಲ. ತೀರ್ಥ ರೂಪದಲ್ಲಿ ದರ್ಶನ ನೀಡುವ ಜೀವನದಿಯನ್ನು ನೋಡಿ ಪುನೀತರಾಗಲು ಯಾವುದೇ ಅಡೆತಡೆ ಇಲ್ಲ.

Facebook Comments