ತಮಿಳುನಾಡಿಗೆ ಹರಿದು ಹೋದ ಕಾವೇರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.4-ರಾಜ್ಯದಿಂದ ತಮಿಳುನಾಡಿಗೆ ಕಳೆದ ಜಲವರ್ಷದಲ್ಲಿ ನಿಗದಿತ ಪ್ರಮಾಣಕ್ಕಿಂತ 97 ಟಿಎಂಸಿ ಅಡಿಗೂ ಹೆಚ್ಚು ವರಿ ನೀರು ಹರಿದು ಹೋಗಿದೆ. ರಾಜ್ಯ ಸರ್ಕಾರದ ಉನ್ನತ ಮೂಲಗಳ ಪ್ರಕಾರ ಜೂನ್‍ನಿಂದ ಮೇ ಅಂತ್ಯದವರೆಗೆ ಜಲವರ್ಷವೆಂದು ಪರಿಗಣಿಸಲಾಗುತ್ತದೆ. ಕಳೆದ ವರ್ಷ ಈ ಅವಧಿಯಲ್ಲಿ ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ ಒಟ್ಟು 273 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿದು ಹೋಗಿದೆ.

ವಾರ್ಷಿಕ 177.25 ಟಿಎಂಸಿ ಅಡಿ ನೀರನ್ನು ರಾಜ್ಯದಿಂದ ತಮಿಳುನಾಡಿಗೆ ಕಾವೇರಿ ಕೊಳ್ಳದಿಂದ ಬಿಡಬೇಕಾಗಿದೆ. ಕಳೆದ ವರ್ಷದ ಮುಂಗಾರಿನಲ್ಲಿ ಭಾರೀ ಮಳೆಯಾಗಿ ಪ್ರವಾಹ ಉಂಟಾಗಿದ್ದರಿಂದ ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದವು. ಅಲ್ಲದೆ, ಆಯಾ ತಿಂಗಳಲ್ಲಿ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ನೀರು ಬಿಡಲಾಗಿತ್ತು. ಹೀಗಾಗಿ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ನೀರಿನ ಬಿಕ್ಕಟ್ಟು ಉದ್ಭವಿಸಿರಲಿಲ್ಲ.

ಜೂನ್ ತಿಂಗಳಿನಿಂದ ಹೊಸ ಜಲವರ್ಷ ಆರಂಭವಾಗಿದ್ದು, ಪ್ರತಿ ತಿಂಗಳು ನಿಗದಿ ಪಡಿಸಿರುವ ಪ್ರಮಾಣದಲ್ಲಿ ತಮಿಳು ನಾಡಿಗೆ ನೀರು ಬಿಡಬೇಕಾಗಿದೆ. ಈ ಬಾರಿಯೂ ಕಾವೇರಿ ಕೊಳ್ಳದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುವ ಲಕ್ಷಣಗಳು ಸದ್ಯಕ್ಕೆ ಕಂಡುಬರುತ್ತಿಲ್ಲ. ಇದೇ ರೀತಿ ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಮುಂದುವರೆದರೆ ತಾನಾಗಿಯೇ ನೀರಿನ ಬಿಕ್ಕಟ್ಟು ಬಗೆಹರಿಯಲಿದೆ.

ಮುಂಗಾರು ಆರಂಭಗೊಂಡಿದ್ದು, ರಾಜ್ಯದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಪ್ರಮಾಣದಷ್ಟು ಮಳೆಯಾಗುವ ಮುನ್ಸೂಚನೆಗಳು ಇವೆ. ಅಲ್ಲದೆ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ನೀರು ಸಂಗ್ರಹವಿದೆ.

ಹೀಗಾಗಿ ಕಾವೇರಿ ಕೊಳ್ಳದ ನಗರ, ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಂಡುಬರಲಿಲ್ಲ. ಕೃಷಿ ಚಟುವಟಿಕೆಗೂ ನೀರಿನ ಸಮಸ್ಯೆ ಉಂಟಾಗಲಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಇನ್ನುಮುಂದೆ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.

Facebook Comments