ತಮಿಳುನಾಡಿಗೆ ಕಾವೇರಿ ನೀರು ಹೆಚ್ಚು ಬಳಕೆಗೆ ಅವಕಾಶ ನೀಡಲ್ಲ : ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22- ಯಾವುದೇ ಕಾರಣಕ್ಕೂ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಲು ತಮಿಳುನಾಡಿಗೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿರುಗೇಟು ನೀಡಿದ್ದಾರೆ. ತಮಿಳುನಾಡಿಗೆ ಹೆಚ್ಚುವರಿ ಕೊಡುವುದಕ್ಕೆ ಸಾಧ್ಯವೇ ಇಲ್ಲ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದರು.

ಅತ್ತ ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಹೆಚ್ಚುವರಿಯಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿಗಳ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.ತಮಿಳುನಾಡು ಸರ್ಕಾರ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಅವಕಾಶ ನೀಡುವ ಪ್ರಶ್ನೆಯೇ ಉದ್ಭವವಿಸುವುದಿಲ್ಲ. ಕಾನೂನಿನ ಪ್ರಕಾರ ಉಭಯ ರಾಜ್ಯಗಳು ನ್ಯಾಯಾಲಯದ ತೀರ್ಪಿನಂತೆ ನಡೆದುಕೊಳ್ಳಬೇಕೆಂದು ತಮಿಳುನಾಡು ಮುಖ್ಯಮಂತ್ರಿಗೆ ಬಿಎಸ್‍ವೈ ಸಲಹೆ ಮಾಡಿದ್ದಾರೆ.

ಅವರು ಹೇಳಿಕೆ ಕೊಟ್ಟಿದ್ದಕ್ಕಾಗಿ ನಾವು ಪ್ರತಿ ಹೇಳಿಕೆ ನೀಡುವ ಅಗತ್ಯವಿಲ್ಲ. ಇದರಿಂದ ಯಾರಿಗೂ ಉಪಯೋಗವೂ ಇಲ್ಲ. ಉಭಯ ರಾಜ್ಯಗಳ ನಡುವಿನ ಬಿಕ್ಕಟ್ಟನ್ನು ನ್ಯಾಯಾಲವೇ ಇತ್ಯರ್ಥ ಮಾಡಿದೆ. ಹಾಗಾಗಿ ಎಲ್ಲರೂ ತೀರ್ಪಿಗೆ ಬದ್ದರಾಗಬೇಕು ಎಂದು ಹೇಳಿದರು.

ಕರ್ನಾಟಕ ಸರ್ಕಾರ ಮತ್ತೊಮ್ಮೆ ತೆಗೆದುಕೊಳ್ಳುವುದಕ್ಕಾಗಿ, ಕೊಡಲಿಕ್ಕಾಗಲಿ ಅವಕಾಶ ಕೊಡುವುದಿಲ್ಲ. ಕಾನೂನಿನಡಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕೋ ಅವೆಲ್ಲವನ್ನೂ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಮನವಿ ಮಾಡಿದರು.

ತಮಿಳುನಾಡು ಸರ್ಕಾರದ ಈ ಕ್ರಮದ ಕುರಿತಾಗಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆಯಲಿದೆಯೇ ಎಂಬ ಪ್ರಶ್ನೆಗೆ, ಸದ್ಯಕ್ಕೆ ನಮ್ಮ ಮುಂದೆ ಅಂತಹ ಆಲೋಚನೆ ಇಲ್ಲ. ಮುಂದೆ ತೀರ್ಮಾನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಮಾ.8ರಂದು ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಲಿದೆ.

ಇವತ್ತು ಎಲ್ಲ ಇಲಾಖೆಗಳ ಪೂರ್ವಭಾವಿ ಸಭೆ ನಡೆಯಲಿದೆ. ನಾಳೆಯಿಂದ ಬಜೆಟ್ ಜೊತೆಗೆ ಏನೇನು ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡಲಿದ್ದೇವೆ. ಬೇರೆ ಬೇರೆ ಇಲಾಖೆಗಳ ಪ್ರಮುಖರ ಜೊತೆ ಚರ್ಚೆ ನಡೆಸಲಾಗುವುದು ಎಂದರು.

ವೀರಶೈವ ಲಿಂಗಾಯಿತ ಪಂಚಮಸಾಲಿ ಮೀಸಲಾತಿ ಹೋರಾಟ ಕುರಿತಾಗಿ ಪ್ರತಿಕ್ರಿಯಿಸಿದ ಬಿಎಸ್‍ವೈ, ಇಂದು ಪಂಚಮಸಾಲಿ ಸಮಾಜದ ಸಚಿವರೇ ಸುದ್ದಿಗೋಷ್ಠಿ ನಡೆಸುತ್ತಾರೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.

Facebook Comments